ಬೆಂಗಳೂರು, ಏ.09: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಆನ್ಲೈನ್ನಲ್ಲಿ ಪ್ರಕಟವಾಗಿದ್ದು, ರಾಜ್ಯದ ವಿದ್ಯಾರ್ಥಿಗಳು ಅಧಿಕೃತ ವೆಬ್ಸೈಟ್ karresults.nic.in ಮೂಲಕ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
ಈ ಬಾರಿ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ದಾಖಲೆ ಮಟ್ಟದ ಏರಿಕೆ ಕಂಡುಬಂದಿದ್ದು, ಒಟ್ಟು 7,10,363 ವಿದ್ಯಾರ್ಥಿಗಳ ಪೈಕಿ ಸುಮಾರು 6.10 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.86ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ ಶೇ.73.45ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, ಈ ಬಾರಿ ಗಣನೀಯ ಸುಧಾರಣೆ ಕಂಡುಬಂದಿದೆ.
ವಾಣಿಜ್ಯ ವಿಭಾಗದಲ್ಲಿ ದಿಶಾ ರಾಜ್ಯಪ್ರಥಮ
ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ಅವರು 600ಕ್ಕೆ 600 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು
2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯದಾದ್ಯಂತ 1217 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಿತು. ಒಟ್ಟು 5174 ಕಾಲೇಜುಗಳ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.
ವಿಭಾಗವಾರು ವಿದ್ಯಾರ್ಥಿಗಳ ಸಂಖ್ಯೆ:
- ವಿಜ್ಞಾನ ವಿಭಾಗ: 2.92 ಲಕ್ಷ
- ವಾಣಿಜ್ಯ ವಿಭಾಗ: 2.11 ಲಕ್ಷ
- ಕಲಾ ವಿಭಾಗ: 1.42 ಲಕ್ಷ
ರಿಸಲ್ಟ್ ಪರಿಶೀಲನೆ ಹೇಗೆ?
ವಿದ್ಯಾರ್ಥಿಗಳು https://karresults.nic.in ವೆಬ್ಸೈಟ್ಗೆ ಭೇಟಿ ನೀಡಿ,
- ರಿಜಿಸ್ಟ್ರೇಶನ್ ನಂಬರ್
- ಜನ್ಮ ದಿನಾಂಕ
ನಮೂದಿಸಿ ‘Submit’ ಬಟನ್ ಒತ್ತಿದರೆ ಅಂಕಪಟ್ಟಿ ಪರದೆ ಮೇಲೆ ಕಾಣಿಸುತ್ತದೆ.
ಡಿಜಿಲಾಕರ್ನಲ್ಲಿ ಮೊದಲ ಬಾರಿಗೆ ಅಂಕಪಟ್ಟಿ
ಈ ಬಾರಿ ಮೊದಲ ಬಾರಿಗೆ DigiLocker ಮೂಲಕವೂ ದ್ವಿತೀಯ ಪಿಯುಸಿ ಫಲಿತಾಂಶ ಹಾಗೂ ಅಂಕಪಟ್ಟಿ ಲಭ್ಯವಾಗುತ್ತಿದೆ. ಅಧಿಕೃತ ವೆಬ್ಸೈಟ್ನಲ್ಲಿ ಸರ್ವರ್ ಸಮಸ್ಯೆ ಎದುರಾದರೆ ವಿದ್ಯಾರ್ಥಿಗಳು digilocker.gov.in ಅಥವಾ ಮೊಬೈಲ್ನ DigiLocker ಆ್ಯಪ್ ಮೂಲಕ ನೇರವಾಗಿ ತಮ್ಮ ಮಾರ್ಕ್ಸ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಇದಲ್ಲದೆ, ಕರ್ನಾಟಕ ಒನ್ ಮೊಬೈಲ್ ಆ್ಯಪ್ ಮೂಲಕವೂ ಫಲಿತಾಂಶ ಲಭ್ಯವಿದ್ದು, ವಿದ್ಯಾರ್ಥಿಗಳ ಮೊಬೈಲ್ಗೆ SMS ಮೂಲಕ ಫಲಿತಾಂಶ ಮಾಹಿತಿ ರವಾನೆಯಾಗಲಿದೆ.
ಸಾಮಾನ್ಯವಾಗಿ ಫಲಿತಾಂಶ ಪ್ರಕಟವಾದ ತಕ್ಷಣ ಲಕ್ಷಾಂತರ ವಿದ್ಯಾರ್ಥಿಗಳು ಒಟ್ಟಿಗೇ ವೆಬ್ಸೈಟ್ಗೆ ಭೇಟಿ ನೀಡುವುದರಿಂದ ಸರ್ವರ್ ಸಮಸ್ಯೆಗಳು ಉಂಟಾಗುವುದು ಸಾಮಾನ್ಯ. ಆದರೆ ಈ ಬಾರಿ ಡಿಜಿಲಾಕರ್ ಸೌಲಭ್ಯದಿಂದ ವಿದ್ಯಾರ್ಥಿಗಳು ವೇಗವಾಗಿ ಮತ್ತು ಸುಲಭವಾಗಿ ಅಂಕಪಟ್ಟಿ ಪಡೆಯುವ ಅವಕಾಶ ದೊರೆತಿದೆ.
