ಹಾಸನ: ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಸವಿಸ್ಕಾರ್ 2026” ಕಾರ್ಯಕ್ರಮವು ಕಲಾ, ಸಾಂಸ್ಕೃತಿಕ ಮತ್ತು ತಾಂತ್ರಿಕ ಪ್ರತಿಭೆಗಳ ಅದ್ಭುತ ಮೇಳವಾಗಿತ್ತು. ಸುಮಾರು 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಪ್ರತಿಭೆಯನ್ನು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಡು, ಸಂಗೀತ, ನೃತ್ಯ, ಚಿತ್ರಕಲೆ ಸೇರಿದಂತೆ ಹಲವು ಕಲಾ ವಿಭಾಗಗಳಲ್ಲಿ ಭಾಗವಹಿಸಿದರು. ತರಕಾರಿಗಳ ಮೂಲಕ ಜೋಡಣೆ ಹಾಗೂ ಕೆತ್ತನೆ ಕಲೆಯಲ್ಲಿ ವಿವಿಧ ಪ್ರಾಣಿಗಳ ಆಕೃತಿ ಹಾಗೂ ಸೃಜನಾತ್ಮಕ ವಿನ್ಯಾಸಗಳನ್ನು ರೂಪಿಸಿ ತಮ್ಮ ಕೌಶಲ್ಯವನ್ನು ತೋರಿಸಿದರು.

ಇದೇ ವೇಳೆ, ತಾಂತ್ರಿಕ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಹಿಂದೆಬಿದ್ದಿಲ್ಲ. ವಿವಿಧ ಪರಿಕರಗಳನ್ನು ಬಳಸಿಕೊಂಡು ಸೇತುವೆಗಳ ನಿರ್ಮಾಣ, ಕಟ್ಟಡ ಮಾದರಿಗಳ ತಯಾರಿ ಹಾಗೂ ಸೃಜನಾತ್ಮಕ ಮಾದರಿಗಳನ್ನು ರೂಪಿಸಿ ತಮ್ಮ ತಾಂತ್ರಿಕ ಚಾತುರ್ಯವನ್ನು ಪ್ರದರ್ಶಿಸಿದರು.
ಪ್ರಬಂಧ, ನಾಟಕ, ಕಥೆ, ಕವಿತೆ ಮುಂತಾದ ಸಾಹಿತ್ಯಿಕ ಚಟುವಟಿಕೆಗಳಲ್ಲಿಯೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಬೆಳಿಗ್ಗೆಯಿಂದ ಸಂಜೆವರೆಗೆ ಕಾರ್ಯಕ್ರಮವನ್ನು ಕಂಗೊಳಿಸಿದರು.
ಈ ಕಾರ್ಯಕ್ರಮವನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ, ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್, ಖಜಾಂಚಿ ಪಾರ್ಶನಾಥ್, ಎ.ವಿ.ಕೆ. ಪಿ.ಯು. ಕಾಲೇಜಿನ ಉಪಾಧ್ಯಕ್ಷ ನಾಗರಾಜ್ ಜೈನ್, ಕಾಲೇಜಿನ ಪ್ರಾಂಶುಪಾಲ ಹೆಚ್.ಜೆ. ಅಮರೇಂದ್ರ ಸೇರಿದಂತೆ ಹಲವು ಗಣ್ಯರು ವೀಕ್ಷಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಇಂದಿರಾ ಬಹದ್ದೂರ್, ಸಹ ಅಧಿಕಾರಿ ಡಾ. ಶಿವಶಂಕರ್, ಪ್ರಥಮ ವರ್ಷದ ಮುಖ್ಯಸ್ಥೆ ಡಾ. ಕಲಾವತಿ, ಪ್ರಾಧ್ಯಾಪಕರಾದ ಡಾ. ಉಮಾ, ಸಂಯೋಜಕರು ಹಾಗೂ ಕ್ಲಬ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಥಮ ವರ್ಷದ ದ್ವಿತೀಯ ಸೆಮಿಸ್ಟರ್ ವಿದ್ಯಾರ್ಥಿಗಳೊಂದಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಹಪ್ರಾಧ್ಯಾಪಕರು ಸಂತೋಷ ಕೂಟದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಸಂಜೆಯ ವೇಳೆಗೆ ನಡೆದ ಬಹುಮಾನ ವಿತರಣೆ ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳು ಮತ್ತು ಬಹುಮಾನಗಳನ್ನು ನೀಡಲಾಯಿತು.
“ಸವಿಸ್ಕಾರ್ 2026” ಕಾರ್ಯಕ್ರಮವು ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ತಾಂತ್ರಿಕ ಸಾಮರ್ಥ್ಯವನ್ನು ಉತ್ತೇಜಿಸುವಲ್ಲಿ ಮಹತ್ವದ ವೇದಿಕೆಯಾಯಿತು.
– ಶಿವಕುಮಾರ್ ಕಟ್ಟಾಯ
