ಕೆ.ಆರ್.ಪೇಟೆ, ಏ.09: ತಾಲ್ಲೂಕಿನಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ತಡೆಗಟ್ಟುವಂತೆ ಆಗ್ರಹಿಸಿ ತಾಲೂಕು ರೈತ ಸಂಘದ ನೂರಾರು ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.
ಕರ್ನಾಟಕ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ನಂದಿನಿ ಜಯರಾಮ್, ಜಿಲ್ಲಾ ರೈತ ಸಂಘದ ಮಾಜಿ ಅಧ್ಯಕ್ಷ ಎಂ.ವಿ. ರಾಜೇಗೌಡ, ತಾಲೂಕು ಘಟಕದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಕೆ.ಆರ್. ಜಯರಾಮ್, ಎಲ್.ಬಿ. ಜಗದೀಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ರೈತರು ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ, ಶಂಖ, ಜಾಗಟೆ ಹಾಗೂ ತುತ್ತೂರಿ ಊದುತ್ತಾ “ರೈತರ ಪಾಲಿಗೆ ಸರ್ಕಾರ ಸತ್ತಿದೆ, ಗೋವಿಂದಾ… ಗೋವಿಂದಾ…” ಎಂದು ಘೋಷಣೆಗಳನ್ನು ಕೂಗಿದರು. ಮಿನಿ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಕುಳಿತು ಧರಣಿ ನಡೆಸುವ ಮೂಲಕ ಪ್ರತಿಭಟನೆಗೆ ವಿಶಿಷ್ಟ ರೂಪ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಎಂ.ವಿ. ರಾಜೇಗೌಡ, ತಾಲೂಕಿನ ಗವೀಮಠದ ಮೊರಾರ್ಜಿ ವಸತಿ ಶಾಲೆಗೆ ಸೇರಬೇಕಾದ ಅಕ್ಕಿಯನ್ನು ಖಾಸಗಿ ರೈಸ್ ಮಿಲ್ಗೆ ಸಾಗಿಸಿರುವ ಆರೋಪವನ್ನು ಎತ್ತಿದರು. ಮಾರ್ಚ್ 17, 2026ರಂದು ಲಾರಿಯೊಂದಿಗೆ ಅಕ್ಕಿಯನ್ನು ಪತ್ತೆ ಹಚ್ಚಿ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿದರೂ, 21 ದಿನಗಳು ಕಳೆದರೂ ಯಾವುದೇ ತನಿಖೆ ನಡೆಸದಿರುವುದನ್ನು ಖಂಡಿಸಿದರು. ಈ ಕುರಿತು ಸಮಗ್ರ ತನಿಖೆ ನಡೆಸಿ, ಸೂಕ್ತ ದಾಖಲೆಗಳನ್ನು ಬಹಿರಂಗಪಡಿಸಿ, ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕು ಎಂದು ಒತ್ತಾಯಿಸಿದರು.

ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ರೈತರ ಕೆಲಸಗಳು ಸುಗಮವಾಗಿ ನಡೆಯುತ್ತಿಲ್ಲ. ದಲ್ಲಾಳಿಗಳ ಮೂಲಕವೇ ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಾರು ಅಧಿಕಾರಿಗಳು ಕಮೀಷನ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಸರ್ಕಾರಿ ಆಸ್ತಿಗಳು ಅತಿಕ್ರಮಣಕ್ಕೆ ಒಳಗಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು.

ಸಂಧಾನ ವಿಫಲ
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್ ಡಾ. ಎಸ್.ಯು. ಅಶೋಕ್, ಏಪ್ರಿಲ್ 18ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಈ ಮನವಿಯನ್ನು ತಿರಸ್ಕರಿಸಿದ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಈ ಸಂದರ್ಭದಲ್ಲಿ ನಂದಿನಿ ಜಯರಾಮ್, ಕೆ.ಆರ್. ಜಯರಾಮ್, ಎಲ್.ಬಿ. ಜಗದೀಶ್, ಮರುವನಹಳ್ಳಿ ಶಂಕರ್, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಾಶ್, ಕೃಷ್ಣಾಪುರ ರಾಜಣ್ಣ, ಸಿಂಧುಘಟ್ಟ ಮುದ್ದುಕುಮಾರ್, ನಗರೂರು ಕುಮಾರ್, ಅಕ್ಕಿಮಂಚನಹಳ್ಳಿ ಹೊನ್ನೇಗೌಡ, ಬೇಲದಕೆರೆ ಶಿವಣ್ಣ, ಚೌಡೇನಹಳ್ಳಿ ಕೃಷ್ಣೇಗೌಡ, ನೀತಿಮಂಗಲ ಮಹೇಶ್, ಕರೋಟಿ ತಮ್ಮಯ್ಯ, ಹಿರೀಕಳಲೆ ಬಸವರಾಜು, ಲಕ್ಷ್ಮೀಪುರ ನಾಗರಾಜು, ನಾರಾಯಣಸ್ವಾಮಿ, ಶಿವಪುರ ಕೆ.ಆರ್.ಎಸ್. ನಾಗರಾಜು ಸೇರಿದಂತೆ ನೂರಾರು ರೈತ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
-ಶ್ರೀನಿವಾಸ್ ಆರ್.
