ಹಾಸನ : ಆಶ್ರಯ ಯೋಜನೆಯಡಿ ಕಾನೂನುಬದ್ಧ ಹಕ್ಕುಪತ್ರ ಹೊಂದಿರುವ ಮನೆಗಳನ್ನು ಧ್ವಂಸಗೊಳಿಸಿರುವುದನ್ನು ಖಂಡಿಸಿ, ಸಮರ್ಪಕ ಪರಿಹಾರ ಹಾಗೂ ಪುನರ್ವಸತಿ ಒದಗಿಸುವಂತೆ ಆಗ್ರಹಿಸಿ ರೈತ ಸಂಘದ ಪ್ರತಿಭಟನೆ ಎರಡನೇ ದಿನವೂ ಮುಂದುವರಿಯಿತು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಡುಗೆ ಸಿದ್ಧಪಡಿಸಿ ಊಟ ಮಾಡುವ ಮೂಲಕ ರೈತರು ತಮ್ಮ ಹೋರಾಟವನ್ನು ಮುಂದುವರಿಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಮುಖಂಡ ಆನೆಕೆರೆ ರವಿ, ಅರಕಲಗೂಡು ತಾಲೂಕಿನ ಎಬಿಎಂ ಹಳ್ಳಿಯ ನಿವಾಸಿಗಳಿಗೆ 1991-92ರಲ್ಲಿ ತಹಶೀಲ್ದಾರ್ ಮೂಲಕ ಆಶ್ರಯ ಯೋಜನೆ (L&D 37/91-92) ಅಡಿಯಲ್ಲಿ ಕಾನೂನುಬದ್ಧವಾಗಿ ನಿವೇಶನ ಹಂಚಿಕೆ ಮಾಡಲಾಗಿತ್ತು ಎಂದು ತಿಳಿಸಿದರು.
ಈ ನಿವೇಶನಗಳಲ್ಲಿ ದಶಕಗಳಿಂದ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರಿಗೆ ಯಾವುದೇ ಪೂರ್ವ ನೋಟಿಸ್ ನೀಡದೆ ಹಾಗೂ ಕಾನೂನು ಪ್ರಕ್ರಿಯೆ ಅನುಸರಿಸದೆ ಮನೆಗಳಿಗೆ ಹಾನಿ ಮಾಡಲಾಗಿದೆ ಎಂದು ಆರೋಪಿಸಿದರು. ಕೆಲ ಮನೆಗಳ ಗೋಡೆಗಳನ್ನು ಕೆಡವಲಾಗಿದ್ದು, ಕೆಲವು ಮನೆಗಳನ್ನು ತೆರವುಗೊಳಿಸಲು ಯತ್ನಿಸಿರುವುದರಿಂದ ಕುಟುಂಬಗಳು ಆತಂಕದಲ್ಲಿವೆ ಎಂದರು.
ತಾಲ್ಲೂಕು ಆಡಳಿತವು ಪ್ರಭಾವಿ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಹಕ್ಕುಪತ್ರದಾರರ ಮೇಲೆ ಅನ್ಯಾಯ ಮಾಡುತ್ತಿದೆ. ಅತಿಕ್ರಮಣಕಾರರ ವಿರುದ್ಧ ಕ್ರಮ ಕೈಗೊಳ್ಳದೇ, ಅವರಿಗೆ ಸಹಕಾರ ನೀಡುತ್ತಿರುವುದು ಅಸಂವಿಧಾನಿಕ ನಡೆ ಎಂದು ಕಿಡಿಕಾರಿದರು. ಜಾಗದ ಸರಿಯಾದ ಅಳತೆ ಹಾಗೂ ಗುರುತುಪಡಿಸುವ ಕೆಲಸ ಮಾಡದೇ ನಿಜವಾದ ಹಕ್ಕುದಾರರನ್ನು ತೊಂದರೆಗೊಳಿಸಲಾಗುತ್ತಿದೆ ಎಂದು ದೂರಿದರು.
ಈ ಘಟನೆ ಬಡ ಕುಟುಂಬಗಳ ಮೂಲಭೂತ ಹಕ್ಕುಗಳ ಮೇಲಿನ ಹಲ್ಲೆಯಾಗಿದ್ದು, ಅವರನ್ನು ಅನಾಥರನ್ನಾಗಿ ಮಾಡುವ ಪ್ರಯತ್ನವಾಗಿದೆ. ತಕ್ಷಣವೇ ಸರ್ಕಾರ ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಪ್ರಮುಖ ಬೇಡಿಕೆಗಳು:
- ಮನೆಗಳ ಧ್ವಂಸ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು
- ಈಗಾಗಲೇ ಹಾನಿಗೊಳಿಸಿದ ಮನೆಗಳಿಗೆ ಸಮರ್ಪಕ ಪರಿಹಾರ ನೀಡಬೇಕು
- ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು
- ಹಕ್ಕುಪತ್ರದ ಆಧಾರದ ಮೇಲೆ ವಾಸಸ್ಥಳ ರಕ್ಷಣೆ ಮಾಡಬೇಕು
- ಸಾರ್ವಜನಿಕ ಯೋಜನೆಗಾಗಿ ಜಾಗ ಬೇಕಾದರೆ ಕಾನೂನುಬದ್ಧ ಪರಿಹಾರ ಹಾಗೂ ಪುನರ್ವಸತಿ ಒದಗಿಸಬೇಕು
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಸಾದಿಕ್, ಜಿಲ್ಲಾಧ್ಯಕ್ಷ ಬಾಬು, ಮುಖಂಡರಾದ ಪವಿತ್ರ, ಅಕ್ಮಲ್ ಪಾಷಾ, ವಿಠಲ್ ಸೇರಿದಂತೆ ಹಲವಾರು ರೈತರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
