ಶ್ಲೋಕ – 06
ಪಶ್ಯಾSದಿತ್ಯಾನ್ ವಸೂನ್ ರುದ್ರಾನಶ್ವಿನೌ ಮರುತಸ್ತಥಾ ।
ಬಹೂನ್ಯದೃಷ್ಟಪೂರ್ವಾಣಿ ಪಶ್ಯಾSಶ್ಚರ್ಯಾಣಿ ಭಾರತ ॥೬॥
ಪಶ್ಯ ಆದಿತ್ಯಾನ್ ವಸೂನ್ ರುದ್ರಾನ್ ಅಶ್ವಿನೌ ಮರುತಃ ತಥಾ ।
ಬಹೂನಿ ಅದೃಷ್ಟ ಪೂರ್ವಾಣಿ ಪಶ್ಯ ಆಶ್ಚರ್ಯಾಣಿ ಭಾರತ — ನೋಡು-ಆದಿತ್ಯರನ್ನು, ವಸುಗಳನ್ನು, ರುದ್ರರನ್ನು, ಅಶ್ವಿಗಳನ್ನು ಮತ್ತು ಮರುತ್ತುಗಳನ್ನು. ಓ ಭಾರತ, ನೋಡು ಹಿಂದೆಂದೂ ಕಂಡಿರದ ಹಲವು ಅಚ್ಚರಿಗಳನ್ನು.
“ಜಗತ್ತಿನಲ್ಲಿರುವ ಎಲ್ಲ ಆದಿತ್ಯರು(ದ್ವಾದಶಾದಿತ್ಯರು), ವಸುಗಳು (ಅಷ್ಟ ವಸುಗಳು), ರುದ್ರರು (ಏಕಾದಶ ರುದ್ರರು), ಅಶ್ವಿಗಳು(ಇಬ್ಬರು), ಮರುತ್ತುಗಳು(ನಲವತ್ತೊಂಬತ್ತು)-ಎಲ್ಲರನ್ನು ನೋಡು. ನೀನು ಹಿಂದೆಂದೂ ಕಂಡು ಕೇಳರಿಯದ ಅತ್ಯದ್ಭುತ ಅಚ್ಚರಿಯನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ‘ಭಾರತ’ ಎಂದು ಸಂಬೋಧಿಸಿದ್ದಾನೆ. ಐತರೇಯ ಬ್ರಾಹ್ಮಣದಲ್ಲಿ ‘ವಾಯರ್ವಾವ ಭರತಃ’ ಎನ್ನುವ ಒಂದು ಮಾತಿದೆ. ಸದಾ ಭಗವಂತನಲ್ಲಿ ನಿರತನಾದ ವಾಯು ದೇವರಿಗೆ ಭರತ ಎಂದು ಹೆಸರು. ಆದ್ದರಿಂದ ಇಲ್ಲಿ ‘ಭಾರತ’ ಎಂದರೆ ‘ಭೀಮ(ಪ್ರಾಣತತ್ವ)ನ ತಮ್ಮ’ ಎನ್ನುವ ಅರ್ಥವನ್ನು ಕೊಡುತ್ತದೆ. [ಸದಾ ಭಗವಂತನಿಗೆ ಅತಿ ಹತ್ತಿರವಿರುವ ಹನುಮಂತ ಅಥವಾ ಪ್ರಾಣತತ್ವದ ಉಪಾಸನೆ ಭಗವಂತನನ್ನು ತಿಳಿಯುವ ಸುಲಭ ಸಾಧನ.]
