ತುಮಕೂರು : ನೀಟ್–2026ರ ಫಲಿತಾಂಶದಲ್ಲಿ ನಗರದ ವಿದ್ಯಾನಿಧಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಗಿರಿಜಾ.ಎನ್.ಅವರು ಆಲ್ ಇಂಡಿಯಾ 738ನೇ ಸ್ಥಾನ ಪಡೆಯುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.ರೋಹಿತ್.ವೈ.ಜಿ. 618 ಅಂಕಗಳೊಂದಿಗೆ 226ರ್ಯಾಂಕ್ ಪಡೆದಿದ್ದಾರೆ. ರಚನಾ ಎಸ್. 591 ಅಂಕ, ನಿಹಾರಿಕಾ ಎ. 553 ಅಂಕ, ವಸುಧೇಂದ್ರ 544 ಅಂಕ, ವರ್ಷಿಣಿ ಎಸ್. 518 ಅಂಕ, ಹರ್ಷನ್ ಗೌಡ 516 ಅಂಕ ಹಾಗೂ ಹೇಮಾ ಟಿ.ಎಸ್. 510 ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.ಒಟ್ಟು 10 ವಿದ್ಯಾರ್ಥಿಗಳು 500 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ) ನಡೆಸಿದ ನೀಟ್–ಯುಜಿ 2026 ಪರೀಕ್ಷೆಗೆ ದೇಶಾದ್ಯಂತ 22,75,011 ಅಭ್ಯರ್ಥಿಗಳು ನೋಂದಾಯಿಸಿ ಕೊಂಡಿದ್ದು, ಅವರಲ್ಲಿ 22,05,035 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಮೂಲಕ ಶೇ. 96.92ರಷ್ಟು ಹಾಜರಾತಿ ದಾಖಲಾಗಿದೆ.ದೇಶದಾದ್ಯಂತ 551 ನಗರಗಳು ಹಾಗೂ ವಿದೇಶಗಳ 14 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಫಲಿತಾಂಶದಲ್ಲಿ ಸುಮಾರು 11.24 ಲಕ್ಷಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.
ವಿದ್ಯಾರ್ಥಿಗಳ ಈ ಯಶಸ್ಸು ಅವರ ನಿರಂತರ ಪರಿಶ್ರಮ, ಪೋಷಕರ ಪ್ರೋತ್ಸಾಹ ಹಾಗೂ ಶಿಕ್ಷಕರ ಸಮರ್ಪಿತ ಮಾರ್ಗದರ್ಶನದ ಫಲವಾಗಿದೆ. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಉನ್ನತ ಗುರಿಗಳನ್ನು ಸಾಧಿಸುವ ಸಂಕಲ್ಪದೊಂದಿಗೆ ವಿದ್ಯಾರ್ಥಿಗಳು ಇದೇ ಶ್ರದ್ಧೆ ಮತ್ತು ಶಿಸ್ತನ್ನು ಮುಂದುವರಿಸಬೇಕು. ಈ ಸಾಧನೆ ವಿದ್ಯಾನಿಧಿ ಕಾಲೇಜಿನ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವ ವಿಶ್ವಾಸವಿದೆ.. ಇವರೆಲ್ಲರೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡುವ ವೈದ್ಯರಾಗಿ ರೂಪುಗೊಳ್ಳಲಿ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಎನ್.ಬಿ. ಪ್ರದೀಪ್ ಕುಮಾರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ವಿದ್ಯಾನಿಧಿ ಪ್ರಾಂಶುಪಾಲರಾದ ಪ್ರೊ.ಎಸ್.ಆರ್.ಸಿದ್ದೇಶ್ವರಸ್ವಾಮಿ, ಸಂಯೋಜಕರು, ಮತ್ತು ಉಪನ್ಯಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ : ಕೆ ಬಿ ಚಂದ್ರಚೂಡ್
