ಹಾಸನ, ಏ.14: ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮದಿನೋತ್ಸವದ ಅಂಗವಾಗಿ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಹೆಚ್. ಜೆ. ಅಮರೇಂದ್ರ ಅವರು ಮಾತನಾಡಿ, “ಶಿಕ್ಷಣವೇ ಸಾಮಾಜಿಕ ಪರಿವರ್ತನೆಯ ಶಕ್ತಿಯುತ ಸಾಧನವಾಗಿದೆ” ಎಂದು ಹೇಳಿದರು.
ಅವರು ಮುಂದುವರಿದು, ವಿದ್ಯಾರ್ಥಿಗಳಲ್ಲಿ ಕೇವಲ ಜ್ಞಾನ ನೀಡುವುದಲ್ಲದೆ, ವ್ಯಕ್ತಿತ್ವ ವಿಕಾಸ, ವಿಮರ್ಶಾತ್ಮಕ ಚಿಂತನೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಸತ್ಯನಿಷ್ಠೆ, ಗೌರವ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ನಿರ್ದೇಶಕರಾದ ಡಾ. ಎಸ್. ಪ್ರದೀಪ್ ಅವರು, ಅಂಬೇಡ್ಕರ್ ಅವರು ಸಮಾನತೆ ಮತ್ತು ಪ್ರಗತಿಯ ಸಮಾಜ ನಿರ್ಮಾಣಕ್ಕೆ ತಮ್ಮ ಸಂಪೂರ್ಣ ಜೀವನವನ್ನೇ ಸಮರ್ಪಿಸಿದ್ದಾರೆ ಎಂದು ಹೇಳಿದರು.
ಇನ್ನೂ ನಿವೃತ್ತ ಪ್ರಾಂಶುಪಾಲರಾದ ಡಾ. ಎ. ಜೆ. ಕೃಷ್ಣಯ್ಯ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನ ರಚನೆ ಮೂಲಕ ಬಡವರು ಮತ್ತು ಹಿಂದುಳಿದ ವರ್ಗಗಳ ಉತ್ತೇಜನಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಇಂದ್ರ ಬಹದ್ದೂರ್, ಎನ್ಎಸ್ಎಸ್ ಅಧಿಕಾರಿ ಡಾ. ವಿಜಯಕುಮಾರ್ ತೀಲೆ, ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ. ಎ. ಎ. ಪ್ರಸನ್ನ, ವಿಭಾಗ ಮುಖ್ಯಸ್ಥರಾದ ಡಾ. ರಾಜಣ್ಣ, ಡಾ. ಹರೀಶ್, ಡಾ. ಸುಮನ ಜಯಪ್ರಕಾಶ್, ರಿಜಿಸ್ಟ್ರಾರ್ ಕುಮುದ, ಮಾಧ್ಯಮ ಸಂಯೋಜಕ ಕಟ್ಟಾಯ ಶಿವಕುಮಾರ್ ಸೇರಿದಂತೆ ಹಲವು ಪ್ರಾಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ವಿಶ್ವ ಶಾಂತಿಗಾಗಿ ಪ್ರಾರ್ಥನೆ ಮಾಡಲಾಯಿತು. ಕಾರ್ಯಕ್ರಮದ ಅಂತ್ಯದಲ್ಲಿ ಸಿಹಿ ವಿತರಣೆ ಮಾಡಲಾಯಿತು.
