ಹಾಸನ : ಉದ್ಯೋಗಾವಕಾಶಗಳನ್ನು ಪಡೆಯಲು ಕೇವಲ ಪದವಿ ಶಿಕ್ಷಣ ಸಾಕಾಗದೆ, ಅದರ ಜೊತೆಗೆ ಪ್ರಾಯೋಗಿಕ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಅಗತ್ಯವಾಗಿದೆ ಎಂದು ಹಾಸನ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್. ಜೆ. ಅಮರೇಂದ್ರ ಅಭಿಪ್ರಾಯಪಟ್ಟರು.
ಅವರು ಇಂದು (16/04/2026) ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ IEEE ಸ್ಟೂಡೆಂಟ್ ಚಾಪ್ಟರ್ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಸ್ಟೂಡೆಂಟ್ ಚಾಪ್ಟರ್ನ ಮಹತ್ವ, ಅದರ ಮೂಲಕ ಲಭ್ಯವಾಗುವ ಅವಕಾಶಗಳು ಹಾಗೂ ಉದ್ಯೋಗಮುಖಿ ಪ್ರಯೋಜನಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಿಕಾ ಜೆ ಅವರು, ಸ್ಟೂಡೆಂಟ್ ಚಾಪ್ಟರ್ ಸಹಭಾಗಿತ್ವದಲ್ಲಿ ವಿವಿಧ ತಾಂತ್ರಿಕ ಮತ್ತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿ, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.
ಇದೇ ವೇಳೆ IEEE ಬ್ರಾಂಚ್ ಕೌನ್ಸಿಲ್ ಮುಖ್ಯಸ್ಥರಾದ ಡಾ. ಪಿ.ಸಿ. ಶ್ರೀಕಾಂತ್ ಅವರು ಮಾತನಾಡಿ, ಹನಿವೆಲ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಅಂತರರಾಷ್ಟ್ರೀಯ ಕಂಪನಿಗಳು IEEE ಸಂಸ್ಥೆಯೊಂದಿಗೆ ಒಡನಾಟ ಹೊಂದಿದ್ದು, ಇದರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳ ಜೊತೆಗೆ ನಾಯಕತ್ವ ಗುಣಗಳೂ ಬೆಳೆಯುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸೀನಿಯರ್ ಪ್ರೊಫೆಸರ್ ಡಾ. ಬಿ. ರಮೇಶ್, IEEE ಸ್ಟೂಡೆಂಟ್ ಚಾಪ್ಟರ್ ಸಲಹೆಗಾರರಾದ ತೇಜೋನಿಧಿ ಎಂ.ಆರ್ ಹಾಗೂ ಇತರ ಬೋಧಕ, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.