ತುಮಕೂರು: ಮಹಿಳಾ ಮೀಸಲಾತಿ ವಿರೋಧಿಸುವ ಪುರುಷಪ್ರಧಾನ ಮನಸ್ಥಿತಿಗಳನ್ನು ಮೆಟ್ಟಿನಿಂತು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿಯ ನಾರಿಶಕ್ತಿ ವಂದನ್ ಅಧಿನಿಯಮ ಜಾರಿಗೆ ತರಲು ಹೊರಟಿರುವುದು ಸ್ವಾಗತಾರ್ಹ. ಮಹಿಳೆಯರ ರಾಜಕೀಯ ಸ್ಥಾನಮಾನಕ್ಕಾಗಿ ಹಲವು ವರ್ಷಗಳಿಂದ ನಡೆದ ಹೋರಾಟಕ್ಕೆ ಮೋದಿ ನ್ಯಾಯ ಒದಗಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ. ಮಂಜುಳಾ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಆದಿಚುಂಚನಗಿರಿಗೆ ಬಂದು ಕಾಲಭೈರವೇಶ್ವರನ ಹಾಗೂ ಚಾಮುಂಡೇಶ್ವರಿಯ ಆಶೀರ್ವಾದ ಪಡೆದುಹೋಗಿ ಲೋಕಸಭೆಯ ವಿಶೇಷ ಅಧಿವೇಶನದಲ್ಲಿ ನಾರಿಶಕ್ತಿ ವಂದನ್ ಅಧಿನಿಯಮ ಜಾರಿ ಮಾಡುತ್ತಿದ್ದಾರೆ.
ಸೀತೆಯನ್ನು ರಾಮ, ದ್ರೌಪದಿಯನ್ನು ಕೃಷ್ಣ ರಕ್ಷಿಸಿದಂತೆ ರಾಜಕೀಯ ಸ್ಥಾನಮಾನ ಕಲ್ಪಿಸುವ ಮೂಲಕ ಮೋದಿಯವರು ದೇಶದ ಮಹಿಳೆಯರ ರಕ್ಷಣೆಯಲ್ಲಿದ್ದಾರೆ ಎಂದು ಅಭಿನಂದಿಸಿದರು.
ಲೋಕಸಭೆ ಹಾಗೂ ರಾಜ್ಯ ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನ ಮೀಸಲಾತಿ ನೀಡುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ, ಯಾರ ಹಕ್ಕನ್ನೂ ಕಸಿದುಕೊಂಡAತಾಗುವುದಿಲ್ಲ. ಲೋಕಸಭೆಯ ಕ್ಷೇತ್ರ ಮರುವಿಂಗಡನೆಯಿAದ 543 ಕ್ಷೇತ್ರಗಳ ಬದಲು 816 ಕ್ಷೇತ್ರಗಳಾಗುತ್ತವೆ.
ಹೆಚ್ಚುವರಿ ಕ್ಷೇತ್ರಗಳು ಮಹಿಳಾ ಮೀಸಲಾತಿ ಪ್ರಮಾಣಕ್ಕೆ ಪೂರಕವಾಗಿರುತ್ತವೆ ಎಂದು ಹೇಳಿದ ಮಂಜುಳಾ, ಮಹಿಳಾ ಮೀಸಲಾತಿ ಬಗ್ಗೆ ಕಾಂಗ್ರೆಸ್ ನಾಯಕರು ಒಂದಲ್ಲೊಂದು ರೀತಿಯಲ್ಲಿ ಆಕ್ಷೇಪ ಮಾಡುತ್ತಲೇ ಬಂದಿದ್ದಾರೆ. ಅವರು ಮಹಿಳೆಯರು ರಾಜಕೀಯ ಸ್ಥಾನ ಪಡೆಯವುದನ್ನು ಸಹಿಸುತ್ತಿಲ್ಲ ಎಂದು ಟೀಕಿಸಿದರು.
ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಮರ್ಥವಾಗಿ ಕೆಲಸ ಮಾಡುತ್ತಿರುವ ಮಹಿಳೆಯರಿಗೆ ದೇಶದ, ರಾಜ್ಯಗಳ ಆಡಳಿತ ಚುಕ್ಕಾಣಿ ಹಿಡಿಯುವ ಅರ್ಹತೆ, ಸಾಮಥ್ಯವಿದೆ ಎಂಬ ಅಚಲ ವಿಶ್ವಾಸ ಹೊಂದಿರುವ ಪ್ರಧಾನಿ ಮೋದಿಯವರು ಮಹಿಳಾ ಮೀಸಲಾತಿಯ ಎಲ್ಲಾ ಅಡ್ಡಿಗಳನ್ನು ನಿವಾರಣೆ ಮಾಡಿ ಜಾರಿಗೆ ತರಲು ಹೊರಟಿದ್ದಾರೆ.
ಇದು ಅವರು ದೇಶದ ಮಹಿಳೆಯರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಮಂಜುಳಾ ಹೇಳಿದರು.
ರಾಜ್ಯ ವಕ್ತಾರರಾದ ಶ್ರೀವಲ್ಲಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮಿತ್ರಾದೇವಿ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜ್ಯೋತಿತಿಪ್ಪೇಸ್ವಾಮಿ, ಮಹಿಳಾ ಮೋರ್ಚಾ ನಗರ ಅಧ್ಯಕ್ಷೆ ವಸಂತ ಸುದರ್ಶನ್, ಪ್ರಧಾನ ಕಾರ್ಯದರ್ಶಿಗಳಾದ ನಾಗರತ್ನ, ಮಂಜುಳಾ ಲೋಕೇಶ್ ಹಾಜರಿದ್ದರು.
ಕೆ.ಬಿ.ಚಂದ್ರಚೂಡ.
