ಕನ್ನಡ ಎನ್ನುವುದು ಕೇವಲ ವರ್ಣಮಾಲೆಯ ಅಕ್ಷರಗಳ ಗುಚ್ಛವಲ್ಲ; ಅದು ಸಹಸ್ರಾರು ವರ್ಷಗಳ ಇತಿಹಾಸದ ಗರ್ಭದಿಂದ ಎದ್ದು ಬಂದ ಒಂದು ಮಹಾನ್ ಸಾಂಸ್ಕೃತಿಕ ಚೇತನ. ಕಲ್ಲಿನಲ್ಲಿ ಕವಿತೆ ಕೆತ್ತಿದ ಕದಂಬರಿಂದ ಹಿಡಿದು, ಅನುಭವ ಮಂಟಪದ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರವರೆಗೆ, ಹರಿದಾಸರ ಭಕ್ತಿಯ ಸುಧೆಯಿಂದ ಹಿಡಿದು ಆಧುನಿಕ ಸಾಹಿತ್ಯದ ನವೋದಯದ ಶಿಖರಗಳವರೆಗೆ ಕನ್ನಡದ ಹಾದಿ ಭವ್ಯವಾದುದು. “ಕನ್ನಡದ ಕಸ್ತೂರಿ”ಯ ಘಮಲು ಗಾಳಿಯಲ್ಲಿ ಲೀನವಾಗಿಲ್ಲ, ಅದು ಕನ್ನಡಿಗರ ಅಸ್ಮಿತೆಯಾಗಿ ಪ್ರತಿ ಕಣದಲ್ಲೂ ವ್ಯಾಪಿಸಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳ ಗೌರವ ಹೊತ್ತ ಈ ಭಾಷೆ, ಜಗತ್ತಿನ ಅತ್ಯಂತ ಶ್ರೀಮಂತ ಭಾಷೆಗಳಲ್ಲಿ ಒಂದು. ಇಂತಹ ಭವ್ಯ ಪರಂಪರೆಯುಳ್ಳ ಭಾಷೆಯ ಭವಿಷ್ಯ ರೂಪಿತವಾಗಬೇಕಿರುವುದು ಕೇವಲ ಸಾಹಿತ್ಯ ಸಮ್ಮೇಳನಗಳ ವೇದಿಕೆಯ ಮೇಲಲ್ಲ ಅಥವಾ ಭಾಷಣಕಾರರ ಶಬ್ದದ ಅಬ್ಬರದಲ್ಲಲ್ಲ; ಬದಲಿಗೆ ನಮ್ಮ ನಾಡಿನ ಹಳ್ಳಿ-ಹಳ್ಳಿಗಳಲ್ಲಿರುವ ಸರ್ಕಾರಿ ಶಾಲೆಗಳ ಕಪ್ಪುಹಲಗೆಯ ಮೇಲೆ. ಆದರೆ ಇಂದು ಆ ಕಪ್ಪುಹಲಗೆಯ ಮೇಲೆ ಮೂಡುತ್ತಿರುವ ಅಕ್ಷರಗಳಿಗಿಂತ ಹೆಚ್ಚಾಗಿ, ಆ ಶಾಲೆಗಳನ್ನು ಉಳಿಸಬೇಕೆಂದು ಹಲುಬುವವರ ಬೂಟಾಟಿಕೆಯೇ ಸಮಾಜದಲ್ಲಿ ದೊಡ್ಡ ವಿಷಾದವಾಗಿ ಮಾರ್ಪಟ್ಟಿದೆ.
ಒಂದು ದೃಷ್ಟಾಂತವನ್ನು ಗಮನಿಸೋಣ: ಒಬ್ಬ ವೈದ್ಯ ತಾನು ತಯಾರಿಸಿದ ಔಷಧದ ಮೇಲೆ ತನಗೇ ನಂಬಿಕೆ ಇಲ್ಲದೆ, ತನ್ನ ಮಗುವಿಗೆ ಮಾತ್ರ ವಿದೇಶದಿಂದ ಆಮದು ಮಾಡಿಕೊಂಡ ಔಷಧಿಯನ್ನು ನೀಡಿ, ರೋಗಿಗಳಿಗೆ ಮಾತ್ರ ತಾನು ತಯಾರಿಸಿದ ‘ಸ್ವದೇಶಿ’ ಔಷಧಿಯನ್ನೇ ಸೇವಿಸಿ ಎಂದು ಒತ್ತಾಯಿಸಿದರೆ ಆ ವೈದ್ಯನ ವೃತ್ತಿಧರ್ಮಕ್ಕೆ ಯಾವ ಬೆಲೆ ಇರುತ್ತದೆ? ಇಂದು ಕರ್ನಾಟಕದ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿರುವ ವಾಸ್ತವ ಈ ದೃಷ್ಟಾಂತಕ್ಕಿಂತ ಭಿನ್ನವಾಗಿಲ್ಲ. ಕನ್ನಡ ಶಾಲೆಗಳನ್ನು ಉಳಿಸಬೇಕು, ಸರ್ಕಾರಿ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಬೇಕು ಎಂದು ಬೀದಿಗಿಳಿದು ಹೋರಾಡುವ ಮುಖಂಡರು, ಘೋಷಣೆ ಕೂಗುವ ಹೋರಾಟಗಾರರು ತಮ್ಮ ಮಕ್ಕಳನ್ನು ಮಾತ್ರ ಪ್ರತಿಷ್ಠಿತ ಇಂಗ್ಲಿಷ್ ಮಾಧ್ಯಮದ ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇಲ್ಲಿ ಭಾಷೆಯ ಮೇಲಿನ ಪ್ರೀತಿಗಿಂತ ಹೆಚ್ಚಾಗಿ ಸಾಮಾಜಿಕ ಅಂತಸ್ತಿನ ವ್ಯಸನ ಎದ್ದು ಕಾಣುತ್ತಿದೆ. ತಮ್ಮ ಮಗುವಿಗೆ ಆಂಗ್ಲ ಭಾಷೆಯ ಸಂಸ್ಕೃತಿ ಬೇಕು, ಆದರೆ ನಾಡಿನ ಸಾಮಾನ್ಯ ಜನರ ಮಕ್ಕಳಿಗೆ ಮಾತ್ರ ಕನ್ನಡದ ಅನಿವಾರ್ಯತೆ ಬೇಕು ಎಂಬ ಇವರ ದ್ವಂದ್ವ ನಿಲುವು ಅತ್ಯಂತ ಅಸಹ್ಯಕರವಾದುದು.
ಇನ್ನು ಶಿಕ್ಷಣ ಕ್ಷೇತ್ರದ ಜೀವನಾಡಿಗಳಾದ ಶಿಕ್ಷಕರ ವಿಚಾರಕ್ಕೆ ಬಂದರೆ ನೋವು ಮತ್ತಷ್ಟು ಆಳವಾಗುತ್ತದೆ. ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ರಾಜ್ಯದ ಅತ್ಯುತ್ತಮ ತರಬೇತಿ ಪಡೆದ, ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಬಂದ ಬುದ್ಧಿವಂತರು. ಆದರೆ ದುರಂತವೆಂದರೆ, ಇವರಲ್ಲಿ ಬಹುತೇಕರು ತಾವು ನೀಡುವ ಬೋಧನೆಯ ಮೇಲೆ ತಮಗೇ ವಿಶ್ವಾಸವಿಲ್ಲದಂತೆ ವರ್ತಿಸುತ್ತಿದ್ದಾರೆ. ಒಬ್ಬ ಶಿಕ್ಷಕ ತನ್ನ ಶಾಲೆಯ ಗುಣಮಟ್ಟದ ಬಗ್ಗೆ ಆತ್ಮವಿಶ್ವಾಸದಿಂದ ಇದ್ದಿದ್ದರೆ, ಆತ ಖಂಡಿತವಾಗಿಯೂ ತನ್ನ ಮಗುವನ್ನು ತನ್ನ ಮುಂದೆಯೇ ಕುರಿಸಿ ಅಕ್ಷರ ಕಲಿಸುತ್ತಿದ್ದ. ಆದರೆ ಸರ್ಕಾರಿ ಶಿಕ್ಷಕರ ಮಕ್ಕಳು ಖಾಸಗಿ ಶಾಲೆಗಳ ಹಳದಿ ಬಣ್ಣದ ಬಸ್ಗಳಲ್ಲಿ ಸಂಚರಿಸುತ್ತಿರುವುದು, ಸಾಮಾನ್ಯ ಪೋಷಕರಲ್ಲಿ ಸರ್ಕಾರಿ ವ್ಯವಸ್ಥೆಯ ಬಗ್ಗೆ ಆತಂಕ ಮತ್ತು ಅಸಮಾಧಾನ ಮೂಡುವಂತೆ ಮಾಡಿದೆ. “ಗುರುವೇ ತನ್ನ ಮಗುವನ್ನು ಅಲ್ಲಿಗೆ ಕಳುಹಿಸುತ್ತಿಲ್ಲ ಎಂದ ಮೇಲೆ, ನನ್ನ ಮಗುವಿನ ಭವಿಷ್ಯ ಅಲ್ಲಿ ಭದ್ರವಾಗಿರಲು ಹೇಗೆ ಸಾಧ್ಯ?” ಎಂಬ ಬಡ ಪೋಷಕನ ಪ್ರಶ್ನೆಗೆ ಉತ್ತರ ನೀಡುವ ನೈತಿಕ ಶಕ್ತಿ ಇಂದು ಯಾರಿಗೂ ಇಲ್ಲದಂತಾಗಿದೆ.
ಸಮಾಜದ ಈ ದ್ವಂದ್ವ ನೀತಿಯೇ ಇಂದು ಸರ್ಕಾರಿ ಶಾಲೆಗಳ ಪತನಕ್ಕೆ ನಾಂದಿ ಹಾಡಿದೆ. ಖಾಸಗಿ ಶಾಲೆಗಳ ವ್ಯಾಮೋಹ ಎನ್ನುವುದು ಪ್ರತಿಷ್ಠೆಯ ಸಾಂಕ್ರಾಮಿಕ ರೋಗದಂತೆ ಹರಡುತ್ತಿದೆ. ಹಳ್ಳಿಗಳಲ್ಲಿಯೂ ಪೋಷಕರು ತಮ್ಮ ಶಕ್ತಿಯನ್ನು ಮೀರಿ ಸಾಲ ಮಾಡಿ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ. ಇದಕ್ಕೆ ಕಾರಣ ಸಮಾಜವನ್ನು ಮುನ್ನಡೆಸಬೇಕಾದವರಲ್ಲಿ ಕಾಣೆಯಾಗಿರುವ ಬದ್ಧತೆ. ಹೋರಾಟಗಾರರು ಮತ್ತು ಶಿಕ್ಷಕರು ಮಾದರಿಯಾಗಿದ್ದರೆ ಇಂದು ಸರ್ಕಾರಿ ಶಾಲೆಗಳ ಚಿತ್ರಣವೇ ಬೇರೆಯಾಗಿರುತ್ತಿತ್ತು. ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿದರೆ, ಆ ಶಾಲೆಯ ಶೌಚಾಲಯ ಸುಸ್ಥಿತಿಯಲ್ಲಿರುತ್ತದೆ, ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗುತ್ತದೆ ಮತ್ತು ಬೋಧನೆಯ ಗುಣಮಟ್ಟವೂ ಹೆಚ್ಚಾಗುತ್ತದೆ. ಏಕೆಂದರೆ ಅಲ್ಲಿ ತನ್ನ ಮಗುವೂ ಕಲಿಯುತ್ತಿದೆ ಎಂಬ ಕಾಳಜಿ ಆ ಶಿಕ್ಷಕನಲ್ಲಿ ಅಥವಾ ಹೋರಾಟಗಾರನಲ್ಲಿ ಜಾಗೃತವಾಗುತ್ತದೆ. ವ್ಯಕ್ತಿಗತ ಲಾಭಕ್ಕಾಗಿ ಸಮಾಜದ ವ್ಯವಸ್ಥೆಯನ್ನು ಬಲಿಕೊಡುವುದು ದೇಶದ್ರೋಹಕ್ಕೆ ಸಮಾನ.
ಹೀಗಾಗಿ, ಕೇವಲ ಭಾಷಣಗಳಿಂದ ಅಥವಾ ಸರ್ಕಾರಿ ಆದೇಶಗಳಿಂದ ಶಾಲೆಗಳನ್ನು ಉಳಿಸಲು ಸಾಧ್ಯವಿಲ್ಲ. ಬದಲಾವಣೆ ಎಂಬುದು ಮನೆಯ ಹೊಸ್ತಿಲಿನಿಂದ, ಹತ್ತಿರದ ಸಂಬಂಧಗಳಿಂದ ಆರಂಭವಾಗಬೇಕು. ಕನ್ನಡದ ಬಗ್ಗೆ ಕಳಕಳಿ ಇರುವ ಪ್ರತಿಯೊಬ್ಬ ಹೋರಾಟಗಾರ ಮತ್ತು ಶಿಕ್ಷಕ ಮೊದಲು ತಮ್ಮ ಮನೆಯ ಅಂಗಳದಲ್ಲಿ ಕನ್ನಡದ ದೀಪ ಹಚ್ಚಲಿ. ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವ ಮೂಲಕ ಸಮಾಜಕ್ಕೆ ಒಂದು ಪ್ರಬಲ ಸಂದೇಶ ರವಾನಿಸಲಿ. ಆಚರಣೆಯಲ್ಲಿಲ್ಲದ ಆದರ್ಶಕ್ಕೆ ಯಾವುದೇ ಬೆಲೆಯಿಲ್ಲ. ಶಬ್ದಗಳ ಅಬ್ಬರವನ್ನು ನಿಲ್ಲಿಸಿ ಕ್ರಿಯೆಯ ಮೂಲಕ ಸತ್ಯವನ್ನು ತೋರಿಸುವ ಕಾಲ ಬಂದಿದೆ. ಇಲ್ಲವಾದರೆ, ಮುಂದಿನ ಪೀಳಿಗೆಗೆ ನಾವು ಕನ್ನಡವನ್ನು ಕೇವಲ ಇತಿಹಾಸದ ಪುಸ್ತಕಗಳಲ್ಲಿರುವ ಒಂದು ಭಾಷೆಯಾಗಿ ಪರಿಚಯಿಸಬೇಕಾದೀತು. ನೈಜ ಕಳಕಳಿಯಿದ್ದಲ್ಲಿ ಮೊದಲು ಮನೆಯಿಂದಲೇ ಬದಲಾವಣೆ ಪ್ರಾರಂಭವಾಗಲಿ; ನಂತರ ಹೋರಾಟದ ಕಹಳೆ ಮೊಳಗಲಿ. ಆಗ ಮಾತ್ರ “ಶಾಲೆ ಉಳಿಸಿ” ಎಂಬ ಘೋಷಣೆಗೆ ಒಂದು ಘನತೆ ಮತ್ತು ಅರ್ಥ ಬರುತ್ತದೆ. ನಮ್ಮ ನಾಡು, ನುಡಿ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ನಾವು ನಮ್ಮ ನೈತಿಕತೆಯನ್ನು ಮೊದಲು ಗಟ್ಟಿಗೊಳಿಸಿಕೊಳ್ಳಬೇಕಿದೆ.
ಮೊಹಮ್ಮದ್ ಅಜರುದ್ದೀನ್ ಅಕ್ಕಿಹೆಬ್ಬಾಳು
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605
