ಹಾಸನ, ಏಪ್ರಿಲ್ 17:ಅಂಗಾಂಗ ದಾನದ ಮೂಲಕ ಐವರ ಜೀವ ಉಳಿಸಿ ಮಾನವೀಯತೆಯ ಮಾದರಿಯಾದ ಯುವತಿ ಮೋನಿಕಾಳಿಗೆ ಅರಸೀಕೆರೆ ಪಟ್ಟಣದಲ್ಲಿ ನೂರಾರು ಮಂದಿ ಕಣ್ಣೀರಿನ ವಿದಾಯ ಸಲ್ಲಿಸಿದರು.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕಾರೇಹಳ್ಳಿ ಗ್ರಾಮದ ನಿವಾಸಿ ಮೋನಿಕಾ (18) ಅವರು ಏಪ್ರಿಲ್ 5ರಂದು ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಮೊಪೆಡ್ನಲ್ಲಿ ತೆರಳುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದಾರೆ.

ಮಗಳ ಸಾವಿನ ನೋವಿನಲ್ಲೂ ಮಾನವೀಯತೆ ಮೆರೆದ ಪೋಷಕರು, ಮೋನಿಕಾಳ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಐವರಿಗೆ ಹೊಸ ಜೀವನ ನೀಡಿದರು. ಈ ಮಹತ್ವದ ನಿರ್ಧಾರದಿಂದ ಮೋನಿಕಾ ಸಮಾಜಕ್ಕೆ ಮಾದರಿಯಾಗಿದ್ದಾರೆ.
ವೈದ್ಯರು ಮಂಗಳವಾರ ರಾತ್ರಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ ಬಳಿಕ, ಅಂಬ್ಯುಲೆನ್ಸ್ನಲ್ಲಿ ಅರಸೀಕೆರೆ ಪಟ್ಟಣಕ್ಕೆ ತರಲಾಯಿತು. ಈ ವೇಳೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಂಬ್ಯುಲೆನ್ಸ್ಗೆ ನೂರಾರು ಮಂದಿ ಹೂಮಳೆ ಸುರಿಸಿ ಗೌರವ ಸಲ್ಲಿಸಿದರು.
ಯುವಕರು ಕೈಯಲ್ಲಿ ಕ್ಯಾಂಡಲ್ ಹಿಡಿದು “ಮೋನಿಕಾ ಅಮರ್ ರಹೇ” ಎಂದು ಘೋಷಣೆ ಕೂಗಿದರು. ಪಟಾಕಿ ಸಿಡಿಸಿ, ಕಣ್ಣೀರಿನ ಮಧ್ಯೆ ಮೋನಿಕಾಳಿಗೆ ಅಂತಿಮ ವಿದಾಯ ಸಲ್ಲಿಸಿದ ದೃಶ್ಯಗಳು ಮನಕಲುಕುವಂತಾಗಿದ್ದವು.
ಮಗಳ ಸಾವಿನಲ್ಲೂ ಸಾರ್ಥಕತೆ ಕಂಡ ಪೋಷಕರ ಮಾನವೀಯತೆ ಹಾಗೂ ಅಂಗಾಂಗ ದಾನದ ಮಹತ್ವ ಈ ಘಟನೆಯ ಮೂಲಕ ಮತ್ತೊಮ್ಮೆ ಹೊರಹೊಮ್ಮಿದೆ.
