ಚನ್ನರಾಯಪಟ್ಟಣ: ನವೋದಯ ವಿದ್ಯಾ ಸಂಘದ ವಿದ್ಯಾರ್ಥಿಗಳು ಪ್ರಸ್ತುತ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡಾ 94.29ರಷ್ಟು ಅತ್ಯುತ್ತಮ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮುರಾರ್ಜಿ ಮಂಜುನಾಥ್ ತಿಳಿಸಿದ್ದಾರೆ.
ನವೋದಯ ವಿದ್ಯಾ ಸಂಸ್ಥೆಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಾಲಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಕಂಡು ಸಂತೋಷ ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿ ಕೆಂಬಾಳು ಶರತ್ ಮಾತನಾಡಿ, ಉತ್ತಮ ಫಲಿತಾಂಶಕ್ಕೆ ಶ್ರಮಿಸಿದ ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಬೋಧಕ ಸಿಬ್ಬಂದಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಈ ವೇಳೆ ನಿರ್ದೇಶಕರಾದ ಆನಂದ್ ಕುಮಾರ್ ಕಾಳೇನಹಳ್ಳಿ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಶಾಲೆಯಲ್ಲಿ ಉಳಿದು ಶಿಕ್ಷಕರಿಗೆ ನಿರಂತರ ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಿ ಪ್ರೋತ್ಸಾಹ ನೀಡಿರುವುದನ್ನು ಸಂಸ್ಥೆ ಪ್ರಶಂಸಿಸಿತು.
ಅವರು ಮಾತನಾಡಿ, ಆಡಳಿತ ಮಂಡಳಿಯ ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಸಂಸ್ಥೆಯನ್ನು ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ವರ್ಷದ ಎಸ್ಎಸ್ಎಲ್ಸಿ ಫಲಿತಾಂಶ ಅದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ನಿರ್ದೇಶಕರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಿ.ಜೆ. ಮಂಜುನಾಥ್, ಗೌರವ ಅಧ್ಯಕ್ಷ ಡಾ. ಶೇಷಶಯನ, ಸಹ ಕಾರ್ಯದರ್ಶಿ ಸಂತೋಷ್, ನಿರ್ದೇಶಕರಾದ ರಂಗೇಗೌಡ, ಕುಮಾರಸ್ವಾಮಿ, ಉಪ ಪ್ರಾಂಶುಪಾಲ ಸ್ವಾಗತಹಳ್ಳಿ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
