ತುಮಕೂರು: ಶ್ರೀ ಸಿದ್ಧಾರ್ಥ ಮಾಧ್ಯಮ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳೆಲ್ಲ ರಾಜ್ಯದ ಎಲ್ಲಾ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಾ ಉತ್ತಮ ಭವಿಷ್ಯ ಕಟ್ಟಿಕೊಂಡಿದ್ದಾರೆ. ಸಂಸ್ಥೆಗೆ ಬಹಳ ಕೀರ್ತಿ ತರಲಾಗಿದೆ. ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ, ಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಮಾಧ್ಯಮ ಹಬ್ಬ ‘ಸಂಭ್ರಮ- 2026′ ಹಾಗೂ ಹಳೆಯ(ಹಿಂದಿನ) ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಗಿ ಬೀಸುವ ಮೂಲಕ ಅವರು ಹಳೆಯ ವಿದ್ಯಾರ್ಥಿಗಳ ಸಮ್ಮಿಲನಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, 1985-86 ರಲ್ಲಿ ಸಂಸ್ಥೆಯ ಜವಾಬ್ದಾರಿ ವಹಿಸಿಕೊಳ್ಳಲಾಯಿತು. ಶಿಕ್ಷಣ ಕ್ಷೇತ್ರದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ, ಹೊಸ ಕೋರ್ಸ್ ಆರಂಭಕ್ಕೆ ಯೋಜನೆ ರೂಪಿಸಲಾಯಿತು. ಬಿಎಸ್.ಸಿ, ಕಂಪ್ಯೂಟರ್ ಆಧಾರಿತ ಭವಿಷ್ಯ ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುವ ಕೋರ್ಸ್ ಆರಂಭಿಸಬೇಕು ಎಂಬ ಉದ್ದೇಶದಿಂದ ಹೊಸ ಹೊಸ ಕೋರ್ಸ್ ಪರಿಚಯಿಸಲಾಯಿತು. ಇದರ ಭಾಗವಾಗಿ ಪತ್ರಿಕೋದ್ಯಮ ಕೋರ್ಸ್ ಶುರು ಮಾಡಲಾಯಿತು ಎಂದರು.
ಮಾಧ್ಯಮ ಕ್ಷೇತ್ರ ಬಹಳಷ್ಟು ಬದಲಾಗಿದೆ. ಒಂದೊAದು ಲೇಖನ, ವರದಿ ಅನೇಕ ಬದಲಾವಣೆ ತರಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಬಹಳಷ್ಟು ಬದಲಾವಣೆ ನೋಡುತ್ತಿದ್ದೇವೆ. ಸಾಮಾಜಿಕ ಜಾಲತಾಣದ ಕಾಲದಲ್ಲೂ ಪತ್ರಿಕೆ ನೋಡುತ್ತೇವೆ. ಪತ್ರಿಕೆಗಳು ಇಂದಿಗೂ ನಂಬಿಕೆ ಉಳಿಸಿಕೊಂಡಿವೆ ಎಂದರು.
ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘ ಸಮಾಗಮ ಆಯೋಜಿಸಿ ಆಯಾ ದಿನ ನಿಗದಿಪಡಿಸಿ,ಎಲ್ಲಾ ಒಟ್ಟಾಗಿ ಸೇರಿಕೊಳ್ಳುತ್ತಾರೆ. ಮಾಧ್ಯಮ ಕ್ಷೇತ್ರದ ಹಳೆಯ ವಿದ್ಯಾರ್ಥಿಗಳು ಸೇರಿ ಪರಿಣಾಮಕಾರಿಯಾಗಿ ಸಂಘ ನಿರ್ಮಿಸಿಕೊಂಡು ಮುನ್ನಡೆಸಿ ಎಂದರು.
ಅಂತಾರಾಷ್ಟ್ರೀಯ, ಮಾಧ್ಯಮ ಸಂಸ್ಥೆಗಳಲ್ಲಿ ತರಬೇತಿಗೆಂದು ವಿದ್ಯಾರ್ಥಿಗಳು ತೆರಳಿದರೆ ಸಂಸ್ಥೆ ವತಿಯಿಂದ ಉತ್ತೇಜನ ಖರ್ಚಿನ ಹಣವನ್ನು ಭರಿಸಲಾಗುವುದು ಎಂದು ಹಳೆಯ ವಿದ್ಯಾರ್ಥಿಗಳಿಗೆ ಡಾ.ಜಿ.ಪರಮೇಶ್ವರ ಘೋಷಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳಿಂದ ಪುರಸ್ಕೃತರಾದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿರಿಯ ಪತ್ರಕರ್ತರೂ, ಪ್ರಜಾಪ್ರಗತಿ ಪತ್ರಿಕೆಯ ಮುಖ್ಯ ವರದಿಗಾರರಾದ ಹರೀಶ್ ಆಚಾರ್ಯ, ಮಾರುತಿಪಾವಗಡ, ವಿಜಯ್ಕುಮಾರ್ ಮತ್ತು ರಾಜ್ ನ್ಯೂಸ್ ನ ಜಿಲ್ಲಾ ವರದಿಗಾರರಾದ ಮಹೇಶ್ ಕುಮಾರ್.ಎನ್.ಇ ರವರುಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ವಿವೇಕ್ ವೀರಯ್ಯ,ಎಸ್.ಪಿ.ಅಶೋಕ್.ಕೆ.ವಿ, ಡಾ. ಮಹಾಂತೇಶ್ ಎಂ ನಡಕಟ್ಟಿ, ಡಾ. ಬಿ.ಟಿ.ಮುದ್ದೇಶ್, ಡಾ. ಜ್ಯೋತಿ.ಸಿ, ಶ್ವೇತಾ.ಎಂ.ಪಿ, ನವೀನ್ ಎನ್.ಜಿ, ಗೌತಮ್ ಎ.ವಿ, ರವಿಕುಮಾರ್, ಮಧುಶ್ರೀ, ಹರೀಶ್ ಕುಮಾರ್, ಎಸ್.ರಾಘವ್, ಮಣಿ ಎಚ್.ಜಿ ಭಾಗವಹಿಸಿದ್ದರು.
– ಕೆ.ಬಿ.ಚಂದ್ರಚೂಡ
