ಕೊರಟಗೆರೆ ;- ಅತ್ಯುನ್ನತವಾದ ಸಂವಿಧಾನವನ್ನು ರಚಿಸಿಕೊಟ್ಟು ಭಾರತ ದೇಶ ಸುಭದ್ರವಾಗಿರುಲು ಕಾರಣರಾದವರು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ತಹಶೀಲ್ದಾರ್ ಮಂಜುನಾಥ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಲಕ್ಷ್ಮಿನರಸಿಂಹ ಕಲ್ಯಾಣಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ ಎಸ್ಟಿ ನೌಕರರ ಸಮನ್ವಯ ಸಮಿತಿ ಕೊರಟಗೆರೆ ಶಾಖೆ ಹಮ್ಮಿಕೋಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಹಾಗೂ ಡಾ.ಬಾಬು ಜಗಜೀವನ್ ರಾಮ್ ರವರ 119 ನೇ ಜನ್ಮದಿನಾಚರಣೆ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಸಮಾರಭದಲ್ಲಿ ಭಾಗವಹಿಸಿ ಮಾತನಾಡಿ ಬಡವ ಬಲ್ಲಿದರೆನ್ನದೆ ಪ್ರತಿಯೊಬ್ಬರಿಗೂ ಓಟಿನ ಶಕ್ತಿಯನ್ನು ನೀಡಿದವರು ಹಾಗೂ ವಿದ್ಯಾರ್ಥಿಗಳಿಗೆ 18 ವರ್ಷಕ್ಕೆ ಮತ ಚಲಾಯಿಸುವ ಅವಕಾಶವನ್ನು ಕಲ್ಪಿಸಿ ಕೊಟ್ಟವರು ಡಾ.ಬಿ.ಆರ್. ಅಂಬೇಡ್ಕರ್ ರವರು ಎಂದು ತಿಳಿಸಿದ ಅವರು ಸಂವಿಧಾನದಲ್ಲಿ ನೀಡಿರುವ ಸ್ವಾತಂತ್ರ್ಯ ಸಮಾನತೆ, ಬಾತೃತ್ವದ ಅಂಶಗಳು ಇಡೀ ಮನುಕುಲಕ್ಕೆ ದಾರಿ ದೀಪವಾಗಿದ್ದು ಸಂವಿಧಾನ ಮೂಲಕ ಪ್ರತಿಯೊಬ್ಬರೂ ಸಮಾನವಾಗಿ ಜೀವಿಸುವ ಹಕ್ಕನ್ನು ನೀಡಿದ್ದು ಸಂವಿಧಾನದ ನೆರಳಿನಲ್ಲಿ ನಾವೆಲ್ಲಾ ಬದುಕುತ್ತಿದ್ದೇವೆ ಎಂದ ಅವರು ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಸ್ವಾಮಿ ವಿವೇಕಾನಂದ ಮಹನೀಯರು ವಿದ್ಯಾರ್ಥಿ ದೆಸೆಯಿಂದಲೇ ಒಳ್ಳೆಯ ಅಂಶಗಳನ್ನು ಮೈಗೊಡಿಸಿಕೊಂಡು ಇಡೀ ವಿಶ್ವಕ್ಕೆ ಮಾದರಿ ಎನಿಸಿಕೊಂಡರು ಹಾಗೇಯೇ ಬಾಬು ಜಗಜೀವನ್ ರಾಮ್ ರವರು ದೇಶದಲ್ಲಿ ಭೀಕರ ಬರಗಾಲದ ಅಭಾವ ಉಂಟಾದಾಗ ಆಹಾರ ಸಚಿವರಾಗಿ ಅದನ್ನು ನಿವಾರಿಸಿದ ಮಹನೀಯರು ದೇಶದ ಉಪ ಪ್ರಧಾನ ಮಂತ್ರಿಗಳಾಗಿ ದೇಶಕ್ಕೆ ಗೌರವವನ್ನು ತಂದುಕೊಟ್ಟರು ಎಂದು ತಿಳಿಸಿದ ಅವರು ಈ ಇಬ್ಬರು ಮಹನೀಯರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಮೂಲಕ ಅವರಿಗೆ ಗೌರವ ಸಮರ್ಪಣೆ ಸಲ್ಲಿಸಬೇಕು ಎಂದು ತಿಳಿಸಿದರು.
ಸಮನ್ವಯ ಸಮಿತಿಯ ರಾಜ್ಯಾಧ್ಯಕ್ಷ ಡಿ.ಶಿವಕುಮಾರ್ ಮಾತನಾಡಿ ನಮಗೆ ಸ್ವತಂತ್ರ ಬಂದು 78 ವರ್ಷಗಳಾದರೂ ಜಾತೀಯತೆ ತೊಲಗಿಲ್ಲ ಇತ್ತೀಚೆಗೆ ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ದೇವಾಲಯ ಪ್ರವೇಶಮಾಡಿದ ದಂಪತಿಗಳನ್ನು ಅರ್ಚಕರು ಹೊರ ಹಾಕಿದ ಘಟನೆ ನಡೆದಿದೆ ಜಾತಿಯ ಕರಾಳ ಛಾಯೆ ಇನ್ನು ನಮ್ಮನ್ನು ಬಿಟ್ಟಿಲ್ಲ ಇದರಿಂದ ನಾವೆಲ್ಲಾ ಸಂಘಟಿತರಾಗಿ ಜಾಗ್ರತರಾಗಬೇಕಿದೆ ಎಂದ ಅವರು ನಿವೃತ್ತರಾಗಿರುವ ಎಲ್ಲಾ ನೌಕರರು ಮುಂದಿನ ತಮ್ಮ ಸೇವೆ ಸಮಾಜಮುಖಿಯಾಗಿರಲ್ಲಿ ಎಂದರು.
ತಾಲೂಕು ಸಮನ್ವಯ ಸಮಿತಿಯ ಅಧ್ಯಕ್ಷ ಲಕ್ಷ್ಮಿಪುತ್ರ ಪ್ರಾಸ್ತಾವಿಕವಾಗಿ ಮಾತನಾಡಿ ತಾಲೂಕಿನಲ್ಲಿ ನಮ್ಮ ಸಮನ್ವಯ ಸಮಿತಿ ನೌಕರರ ಸಮಸ್ಯಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಸಮಸ್ಯೆಗಳನ್ನು ನಿವಾರಣೆ ಮಾಡಿರುವ ಎಕೈಕ ಸಮಿತಿ ಎಂದರೆ ಅದು ಕೊರಟಗೆರೆ ತಾಲೂಕು ಸಮಿತಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷ ನರಿಸಿಂಹಮೂರ್ತಿ, ಪ್ರಿಯದರ್ಶಿನಿ ಕಾಲೇಜಿನ ಪ್ರಾಂಶುಪಾಲ ರುದ್ರೇಶ್ ಮಾತನಾಡಿದರು,
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಫೈರೋಜ್ ಬೇಗಮ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಯಮುನಾ, ಬಿಸಿಎಂ ಅಧಿಕಾರಿ ಅನಂತರಾಜು, ಜಿಲ್ಲಾ ಧಾಮಿಕ ದತ್ತಿ ಸಮಿತಿಯ ಸದಸ್ಯರಾದ ಶ್ರೀರಂಗರಾಜು, ಸಮನ್ವಯ ಸಮಿತಿ ಖಜಾಂಚಿ ಮೋಹನ್, ಮುಖಂಡರುಗಳಾದ ನಾಗರಾಜು, ಮಾಜಿ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೋಟೆಕಲ್ಲಯ್ಯ, ಸಮನ್ವಯ ಸಮಿತಿ ಜಿಲ್ಲಾ ಉಪಾಧ್ಯಕ್ಷ ಹನುಮಂತರಾಜು, ತಾಲೂಕು ಸಮಿತಿ ಉಪಾಧ್ಯಕ್ಷ ತಿಪ್ಪೇಸ್ವಾಮಿ, ಪದಾದಿಕಾರಿಗಳಾದ ಸತೀಶ್, ಬಿ.ಕೆ.ಮಂಜುನಾಥ್, ಪುಟ್ಟರಾಜು, ಸಿ.ವೆಂಕಟೇಶ್, ರಾಮಾಂಜನೇಯ, ಸಿ.ನಾಗರಾಜು, ಮಾರುತಿ, ಪ್ರಸನ್ನ ಸೇರಿದಂತೆ ಪ್ರಿಯದರ್ಶಿನಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
– ಶ್ರೀನಿವಾಸ್ ಕೊರಟಗೆರೆ
