ಹಾಸನ: ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ನಡೆದ ದಾರುಣ ಘಟನೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ.
ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಏಪ್ರಿಲ್ 29 ರಂದು ನಡೆದ ದೌರ್ಜನ್ಯ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಮ್ಯಾ (34) ಅವರು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಎರಡು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ರಮ್ಯಾ ಅವರು ಚಂದ್ರ ಎಂಬುವವನೊಂದಿಗೆ ಪರಿಚಯ ಹೊಂದಿದ್ದರು. ಏಪ್ರಿಲ್ 27 ರಂದು ಅತ್ತೆಯ ಮರಣದ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ವೇಳೆ, ಆರೋಪಿ ಚಂದ್ರ ತನ್ನೊಂದಿಗೆ ಬರಬೇಕೆಂದು ಒತ್ತಾಯಿಸಿದ್ದಾನೆ.
ಆದರೆ ಆತನ ಬೇಡಿಕೆಗೆ ಒಪ್ಪದ ಹಿನ್ನೆಲೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಕ್ರೌರ್ಯ ತೋರಿದ್ದಾನೆ ಎನ್ನಲಾಗಿದೆ. ಗಂಭೀರ ಗಾಯಗಳಿಂದ ಬಳಲುತ್ತಿದ್ದ ರಮ್ಯಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಹೋಂ ನರ್ಸಿಂಗ್ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಮ್ಯಾ ಅವರನ್ನು ಊರಿಗೆ ಬಂದ ಸಂದರ್ಭದಲ್ಲಿ ಖಾಸಗಿ ಭೇಟಿ ನೆಪದಲ್ಲಿ ಕರೆದು ದಾಳಿ ನಡೆಸಿದ ಆರೋಪ ಚಂದ್ರನ ಮೇಲೆ ಕೇಳಿಬಂದಿದೆ.
ಘಟನೆ ಸಂಬಂಧ ಯಸಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಚಂದ್ರನನ್ನು ಪೊಲೀಸರು ಬಂಧಿಸಿದ್ದಾರೆ.
🔴 ಹೈಲೈಟ್ಸ್:
- ಅಕ್ರಮ ಸಂಬಂಧಕ್ಕೆ ಒಪ್ಪದಿದ್ದಕ್ಕೆ ಮಹಿಳೆ ಮೇಲೆ ಕ್ರೌರ್ಯ
- ಗಂಭೀರ ಗಾಯಗೊಂಡಿದ್ದ ರಮ್ಯಾ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಸಕಲೇಶಪುರ ತಾಲೂಕಿನ ಅತ್ತಿಹಳ್ಳಿ ಗ್ರಾಮದಲ್ಲಿ ಘಟನೆ
- ಆರೋಪಿ ಚಂದ್ರ ಬಂಧನ
