ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯಲ್ಲಿ ನೂತನ ಪದಾಧಿಕಾರಿಗಳು ಮೇ 2, 2026 ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.
ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಅಧ್ಯಕ್ಷರಾಗಿ ಬಿ.ಆರ್. ಗುರುದೇವ್ ಅಧಿಕಾರ ಸ್ವೀಕರಿಸಿದರೆ, ಪ್ರಧಾನ ಕಾರ್ಯದರ್ಶಿಯಾಗಿ ಜಿ.ಟಿ. ಕುಮಾರ್, ಸಹ ಕಾರ್ಯದರ್ಶಿಯಾಗಿ ಜಿ.ಆರ್. ಶ್ರೀನಿವಾಸ್ ಹಾಗೂ ಖಜಾಂಚಿಯಾಗಿ ಎಸ್.ಜಿ. ಶ್ರೀದರ್ ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಆಶೋಕ್ ಹಾರನಹಳ್ಳಿ, ನಿರ್ದೇಶಕರಾದ ಕೆ.ಎಂ. ಶಿವಣ್ಣ, ಡಾ. ಅರವಿಂದ್, ಬೂವನಹಳ್ಳಿ ಶ್ರೀನಿವಾಸ್, ಕೆ.ಎನ್. ಗುರಪ್ಪ, ಹೆಚ್. ಸುರೇಶ್, ಕೆ. ಪ್ರಭಾಕರ್, ಮಾಜಿ ಕಾರ್ಯದರ್ಶಿ ಬಿ.ಕೆ. ಮಂಜುನಾಥ್ ಹಾಗೂ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿ ನಾಕಲಗೂಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಧಿಕಾರ ಸ್ವೀಕರಿಸಿದ ನಂತರ ನೂತನ ಪದಾಧಿಕಾರಿಗಳು ಮಲೆನಾಡು ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಸಂಸ್ಥೆಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವೇಳೆ, ಮಾಜಿ ಶಾಸಕ ಹಾಗೂ ಹಾಸನ ಜಿಲ್ಲಾ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಮಾಜಿ ಅಧ್ಯಕ್ಷರಾಗಿರುವ ಬಿ.ಆರ್. ಗುರುದೇವ್ ಅವರ ಆಯ್ಕೆಗೆ ವಿವಿಧ ಸಂಘಟನೆಗಳಿಂದ ಅಭಿನಂದನೆಗಳು ವ್ಯಕ್ತವಾಗಿವೆ.
1960ರಲ್ಲಿ ಸ್ಥಾಪಿತವಾದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ವೀರಶೈವ ಲಿಂಗಾಯತ ಸಮುದಾಯದ ಪ್ರಮುಖ ಶಿಕ್ಷಣ ಸಂಸ್ಥೆಯಾಗಿದ್ದು, ಯಸಳೂರು ಧರ್ಮಪ್ಪ, ಬಾಳ್ಳುಪೇಟೆ ಗುರಪ್ಪ ಹಾಗೂ ಕುಂಭರಹಳ್ಳಿ ಬಿ.ಬಿ. ಶಿವಪ್ಪ ಅವರು ಸಂಸ್ಥೆಯ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡಿದ್ದಾರೆ. ಸುಮಾರು 40 ವರ್ಷಗಳ ಬಳಿಕ ಬಾಳ್ಳುಪೇಟೆಯ ಬಿ.ಆರ್. ಗುರುದೇವ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷವೆಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾಸನ ತಾಲೂಕು ಘಟಕದ ಅಧ್ಯಕ್ಷ ಕಟ್ಟಾಯ ಶಿವಕುಮಾರ್ ತಿಳಿಸಿದ್ದಾರೆ.
ಹೈಲೈಟ್ಸ್:
- ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಗೆ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ
- ಬಿ.ಆರ್. ಗುರುದೇವ್ ಅಧ್ಯಕ್ಷರಾಗಿ ಅಧಿಕಾರ ವಹಣೆ
- ವಿವಿಧ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ
- ಶಿಕ್ಷಣ ಸಂಸ್ಥೆಗಳ ಭೇಟಿ, ಪರಿಶೀಲನೆ
- ಸಂಘಟನೆಗಳಿಂದ ಅಭಿನಂದನೆಗಳ ಸುರಿಮಳೆ
