ಶ್ಲೋಕ – 34
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾSನ್ಯಾನಪಿ ಯೋಧವೀರಾನ್ ।
ಮಯಾ ಹತಾಂಸ್ತ್ವಂ ಜಹಿ ಮಾ ವ್ಯಥಿಷ್ಠಾ ಯುದ್ಧ್ಯಸ್ವ ಜೇತಾಸಿ ರಣೇ ಸಪತ್ನಾನ್ ॥೩೪॥
ದ್ರೋಣಂ ಚ ಭೀಷ್ಮಂ ಚ ಜಯದ್ರಥಂ ಚ ಕರ್ಣಂ ತಥಾ ಅನ್ಯಾನ್ ಅಪಿ ಯೋಧ ವೀರಾನ್ ।
ಮಯಾ ಹತಾನ್ ತ್ವಮ್ ಜಹಿ ಮಾ ವ್ಯಥಿಷ್ಠಾಃ ಯುದ್ಧ್ಯಸ್ವ ಜೇತಾ ಅಸಿ ರಣೇ ಸಪತ್ನಾನ್ – ನಾನೆ ಕೊಂದ ಇವರನ್ನು ನೀನು ಮುಗಿಸಿಬಿಡು: ದ್ರೋಣನನ್ನು, ಭೀಷ್ಮನನ್ನು, ಜಯದ್ರಥನನ್ನು ಮತ್ತು ಕರ್ಣನನ್ನು; ಹಾಗೆಯೆ ಬೇರೆ ವೀರ ಹೊರಾಳುಗಳನ್ನು ಕೂಡ. ಕಂಗೆಡಬೇಡ, ಹೋರಾಡು. ಕಾಳಗದಲ್ಲಿ ಹಗೆಗಳನ್ನು ಗೆಲ್ಲಲಿರುವೆ.
ಇಲ್ಲಿ ನೆರೆದಿರುವ ದ್ರೋಣ, ಭೀಷ್ಮ, ಜಯದ್ರಥ, ಕರ್ಣ, ಇವರೆಲ್ಲರ ಆಯಸ್ಸನ್ನು ನಾನು ಹೀರಿದ್ದೇನೆ. ಆದ್ದರಿಂದ ನೀನು ಅದಕ್ಕಾಗಿ ದುಃಖಪಡುವ ಅಗತ್ಯವಿಲ್ಲ. ಈ ಜೀವನ ತರಂಗ ಅನಿವಾರ್ಯ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆದ್ದರಿಂದ ಎದ್ದು ಹೋರಾಡು. ನೀನು ಈ ಧರ್ಮ ಯುದ್ಧದಲ್ಲಿ ಗೆಲ್ಲುವೆ. ನನ್ನ ರಕ್ಷೆಯ ಪೂರ್ಣ ಪ್ರಸಾದ ನಿನ್ನೊಂದಿಗಿದೆ-ಎಂದು ಕೃಷ್ಣ ಆಶೀರ್ವದಿಸುತ್ತಾನೆ.
ಮೊದಲು “ಸೇನಯೋರುಭಯೋರ್ಮಧ್ಯೇ ರಥಂ ಸ್ಥಾಪಯ ಮೇಚ್ಯುತ” ಎಂದು ಅಹಂಕಾರದಿಂದ ಮಾತನಾಡಿದ್ದ ಅರ್ಜುನ, ನಂತರ ತನ್ನ ಮುಂದೆ ನಿಂತಿರುವ ಹಿರಿಯರನ್ನು ಕಂಡು ಕುಗ್ಗಿ ಯುದ್ಧ ಬೇಡ ಎಂದು ನಿಂತು ಬಿಟ್ಟಿದ್ದ. ಈ ಎರಡೂ ಸ್ಥಿತಿ ಯಾವುದೇ ವಸ್ತುಸ್ಥಿತಿ ಇಲ್ಲದ ನಿರ್ಧಾರವಾಗಿತ್ತು. ಈ ಕಾರಣಕ್ಕಾಗಿ ಕೃಷ್ಣ ಈ ಹತ್ತು ಅಧ್ಯಾಯಗಳಲ್ಲಿ ಅರ್ಜುನನಿಗೆ ಉಪದೇಶ ಮಾಡಿ, ಯುದ್ಧ ಎನ್ನುವುದು ಧರ್ಮ ಎನ್ನುವುದನ್ನು ಮನವರಿಕೆ ಮಾಡಿ ಕೊಟ್ಟ. ಈಗ ತನ್ನ ವಿಶ್ವರೂಪ ದರ್ಶನ ಕೊಟ್ಟು-“ನೀನು ಕೇವಲ ನಿಮಿತ್ತ ಮಾತ್ರ” ಎಂದು ಹೇಳಿದ. ಕೃಷ್ಣನ ಆ ಭಯಂಕರ ರೂಪ, ಮತ್ತು ಆತನ ಮಾತನ್ನು ಕೇಳಿ ಅರ್ಜುನ ಏನು ಮಾಡಿದ ಎನ್ನುವುದನ್ನು ಸಂಜಯ ಮುಂದಿನ ಶ್ಲೋಕದಲ್ಲಿ ವರ್ಣಿಸುತ್ತಾನೆ:
