ತುಮಕೂರು: ಪಶ್ಚಿಮ ಬಂಗಾಳ ಸೇರಿದಂತೆ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಜಿಲ್ಲಾ ಬಿಜೆಪಿ ಸೋಮವಾರ ನಗರದಲ್ಲಿ ವಿಜಯೋತ್ಸವ ಆಚರಿಸಿತು. ಬಿಜಿಎಸ್ ಪಕ್ಷದ ಮುಖಂಡರು ವೃತ್ತದಲ್ಲಿಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಬಿಜೆಪಿ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿಯವರು ಜನಿಸಿದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರ ದುಷ್ಟ ಸರ್ಕಾರದ ವಿರುದ್ಧ ಅಲ್ಲಿನ ಜನ ಸೆಟೆದು ನಿಂತು ಆ ಸರ್ಕಾರವನ್ನು ಕೊನೆಗಾಣಿಸಿದ್ದಾರೆ.ದೇಶ ವಿರೋಧಿಗಳಿಗೆ ಆಧಾರ್ಕಾರ್ಡ್, ಎಲೆಕ್ಷನ್ ಐಡಿಕೊಟ್ಟು ಪೋಷಿಸಿ ದೇಶದ ಭದ್ರತೆಯ ಸಮಸ್ಯೆಗೆ ಕಾರಣವಾಗಿದ್ದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರು ತೆಗದುಕೊಂಡು ದಿಟ್ಟ ಕ್ರಮವನ್ನು ಅಲ್ಲಿನ ಜನ ಬೆಂಬಲಿಸಿದ್ದಾರೆ ಎಂದು ಹೇಳಿದರು.
ಬಾಂಗ್ಲಾದ ದುರಾಡಳಿತದ ವಿರುದ್ಧ ರೊಚ್ಚಿಗೆದ್ದ ಅಲ್ಲಿನ ಮತದಾರರು ಮಮತಾ ಬ್ಯಾನರ್ಜಿ ಸರ್ಕಾರಕ್ಕೆತಕ್ಕ ಪಾಠ ಕಲಿಸಿದ್ದಾರೆ.ಅಲ್ಲಿನ ಮತದಾರರು, ಬಿಜೆಪಿಯ ನಿಷ್ಠಾವಂತಕಾರ್ಯಕರ್ತರಿಗೆ ಈ ವಿಜಯವನ್ನು ಮುಡುಪಾಗಿಡಬೇಕು. ನಮ್ಮರಾಜ್ಯದಲ್ಲಿಯೂ ಮುಂದಿನ ದಿನಗಳಲ್ಲಿ ಇದೇ ಫಲಿತಾಂಶ ನಿರೀಕ್ಷಿಸಬಹುದಾಗಿದೆಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್. ರವಿಶಂಕರ್ ಹೆಬ್ಬಾಕ ಮಾತನಾಡಿ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಪುದಚೇರಿ ರಾಜ್ಯದಲ್ಲಿ ಬಿಜೆಪಿ ನೇತೃತ್ವಕ್ಕೆ ಭರ್ಜರಿ ಗೆಲುವು ಸಿಕ್ಕಿದೆ.ಓಲೈಕೆ ರಾಜಕಾರಣಕ್ಕೆ ಬೆಲೆ ಇಲ್ಲ, ಅಭಿವೃದ್ಧಿಗೆ ಮಾತ್ರ ಬೆಲೆ ಎಂಬುದು ಈ ಚುನಾವಣೆಯಿಂದ ಸಾಬೀತಾಗಿದೆ.ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಚುನಾವಣೆ ಮೂರು ತಿಂಗಳ ಮೊದಲೇ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ್ದರು. ಅವರ ಪಕ್ಷವನ್ನು ಅಲ್ಲಿನ ಮತದಾರರು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ.ಓಲೈಕೆ, ಆಮಿಷದ ಸರ್ಕಾರವನ್ನು ಜನ ನಂಬುವುದಿಲ್ಲ. ಇದೇ ನೀತಿ ಅನುಸರಿಸಿಕೊಂಡು ಬರುತ್ತಿರುವ ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನೂ ಜನ ಮನೆಗೆ ಕಳಿಸುತ್ತಾರೆ ಎಂದರು.
ಮುಖಂಡ ಎಸ್.ಪಿ.ಚಿದಾನಂದ್, ಟಿ.ಹೆಚ್. ಹನುಮಂತರಾಜು, ಮುಖಂಡರಾದ ಹೆಚ್.ಎಂ.ರವೀಶಯ್ಯ, ಸತ್ಯಮಂಗಲಜಗದೀಶ್,ವಿರೂಪಾಕ್ಷಪ್ಪ, ಜ್ಯೋತಿತಿಪ್ಪೇಸ್ವಾಮಿ, ವಸಂತಮ್ಮ, ಗಣೇಶ್ಪ್ರಸಾದ್, ಪ್ರೀತಂಜೈನ್, ಕೊಪ್ಪಲ್ ನಾಗರಾಜು ಮತ್ತಿತರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
