ಹಾಸನ: ನಗರದ ಹೊಸ ಬಸ್ ನಿಲ್ದಾಣದ ಬಳಿ ಕ್ಷುಲ್ಲಕ ಕಾರಣಕ್ಕೆ ಎರಡು ಅಂಗಡಿಗಳ ಮಾಲೀಕರ ನಡುವೆ ಗಲಾಟೆ ನಡೆದು, ಪರಸ್ಪರ ದೊಣ್ಣೆ ಹಾಗೂ ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿಕೊಂಡ ಘಟನೆ ನಡೆದಿದೆ.
ಸಾರ್ವಜನಿಕರ ಎದುರೇ ಇಬ್ಬರು ಯುವಕರು ಹೊಡೆದಾಡಿಕೊಂಡ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗಲಾಟೆ ತೀವ್ರ ಸ್ವರೂಪಕ್ಕೆ ತಿರುಗುತ್ತಿದ್ದಂತೆ ಸ್ಥಳದಲ್ಲಿದ್ದ ಕೆಲವರು ಮಧ್ಯಸ್ಥಿಕೆ ವಹಿಸಲು ಮುಂದಾದರು.
ಈ ವೇಳೆ ಮಹಿಳೆಯೊಬ್ಬರು ಜಗಳ ಬಿಡಿಸಲು ಪ್ರಯತ್ನಿಸಿದರೂ, ಇಬ್ಬರ ನಡುವಿನ ವಾಗ್ವಾದ ಮತ್ತಷ್ಟು ಹೆಚ್ಚಾಗಿ ಹೊಡೆದಾಟ ಮುಂದುವರಿದಿದೆ ಎಂದು ತಿಳಿದುಬಂದಿದೆ.
ಕೆಎಸ್ಆರ್ಟಿಸಿ ಸಿಬ್ಬಂದಿಗಳ ಎದುರೇ ಘಟನೆ ನಡೆದಿದ್ದು, ಕೆಲಕಾಲ ಬಸ್ ನಿಲ್ದಾಣದ ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸಾರ್ವಜನಿಕರು ಘಟನೆಯನ್ನು ತಮ್ಮ ಮೊಬೈಲ್ಗಳಲ್ಲಿ ಚಿತ್ರೀಕರಿಸಿದ್ದಾರೆ.
ಈ ಘಟನೆ ಹಾಸನ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
