ಹಾಸನ, ಆ.10: ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆ, ಬೆಂಗಳೂರು ಹಾಗೂ ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆ, ಹೊಳೆನರಸಿಪುರ ತಾಲ್ಲೂಕು ಇವರ ಸಂಯುಕ್ತಾಶ್ರಯದಲ್ಲಿ ಇಷ್ಟಲಿಂಗ ಪೂಜೆ ಹಾಗೂ ಉಚಿತ ಲಿಂಗಧಾರಣೆ ಕಾರ್ಯಕ್ರಮವನ್ನು ಆಗಸ್ಟ್ 16ರಂದು ಭಾನುವಾರ ಹೊಳೆನರಸಿಪುರ ತಾಲ್ಲೂಕಿನ ಚನ್ನಾಪುರ ಗ್ರಾಮದ ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 7 ಗಂಟೆಯಿಂದ ಇಷ್ಟಲಿಂಗ ಪೂಜೆ ಹಾಗೂ ಲಿಂಗಧಾರಣೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ ಎಂದು ಹೊಳೆನರಸಿಪುರ ತಾಲ್ಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬೀಚೇನಹಳ್ಳಿ ಬಿ.ಎಂ. ಚಂದ್ರಶೇಖರ್ ತಿಳಿಸಿದ್ದಾರೆ.
ರಾಮನಾಥಪುರದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ಬೆಳಿಗ್ಗೆ 9 ಗಂಟೆಗೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ನುಗ್ಗೆಹಳ್ಳಿ ಪುರವರ್ಗ ಹಿರೀಮಠದ ಶ್ರೀ ಷ.ಬ್ರ. ಡಾ. ಮಹೇಶ್ವರ ಶಿವಚಾರ್ಯ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು.
ಬೆಂಗಳೂರು ವಿಶ್ವ ವೀರಶೈವ-ಲಿಂಗಾಯಿತ ಮಹಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ರಾಜಪುರ ಮಠದ ವೇ.ಶ್ರೀ ನಟರಾಜುರವರು ದಿವ್ಯ ಸಮ್ಮುಖ ವಹಿಸಲಿದ್ದಾರೆ. ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆಯ ರಾಜ್ಯಾಧ್ಯಕ್ಷ ರಾಮನಾಥಪುರದ ಎಂ.ಎನ್. ಕುಮಾರಸ್ವಾಮಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಹೊಳೆನರಸಿಪುರ ತಾಲ್ಲೂಕು ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆಯ ಅಧ್ಯಕ್ಷ ವೇ.ಸಿ.ಆರ್. ಮಹೇಶ್ ಅಧ್ಯಕ್ಷತೆ ವಹಿಸಲಿದ್ದು, ಹಾಸನ ಜಿಲ್ಲಾ ವಿಶ್ವ ವೀರಶೈವ ಲಿಂಗಾಯಿತ ಮಹಾ ವೇದಿಕೆಯ ಅಧ್ಯಕ್ಷ ಹಳ್ಳಿಮೈಸೂರು ಪ್ರಕಾಶ್ ನೇತೃತ್ವ ವಹಿಸಲಿದ್ದಾರೆ. ರಾಜ್ಯ ಉಪಾಧ್ಯಕ್ಷ ಶರಣ ಬಿ.ಆರ್. ಪಂಚಾಕ್ಷರಿ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಹಾಸನ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು, ಹೊಳೆನರಸಿಪುರ ತಾಲ್ಲೂಕು ನಿರ್ದೇಶಕರು, ಗಣ್ಯರು ಹಾಗೂ ಚನ್ನಾಪುರ ಗ್ರಾಮಸ್ಥರು ಭಾಗವಹಿಸಿ ಸಹಕರಿಸಲಿದ್ದಾರೆ.

ಇಷ್ಟಲಿಂಗ ಪೂಜೆ ಹಾಗೂ ಲಿಂಗಧಾರಣೆಯಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಕರಡಿಗೆ, ಲಿಂಗ, ವಸ್ತ್ರ ಹಾಗೂ ಶಿವಧಾರವನ್ನು ಉಚಿತವಾಗಿ ವಿತರಿಸಲಾಗುವುದು. ಆಸಕ್ತರು ಆಗಸ್ಟ್ 15ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಬಿ.ಎಂ. ಚಂದ್ರಶೇಖರ್ ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗೆ: ಮೊಬೈಲ್: 9743336974, 7259667859.
– ಕುಮಾರಸ್ವಾಮಿ ಎಂ.ಎನ್.
