ಹಾಸನ: ಸಮಾಜದ ವಿವಿಧ ಕ್ಷೇತ್ರಗಳ ನಡುವೆ ಉತ್ತಮ ಬಾಂಧವ್ಯ ಬೆಳೆಸುವ ಉದ್ದೇಶದಿಂದ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮೇ ೯ ಮತ್ತು ೧೦ರಂದು ಪತ್ರಕರ್ತರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸ್ನೇಹ ಸೌಹಾರ್ದ ಕ್ರಿಕೆಟ್ ಸಮ್ಮಿಲನವನ್ನು ಆಯೋಜಿಸಲಾಗಿದೆ.
ನಗರದ ಸರ್ಕಾರಿ ಕಲಾ ಕಾಲೇಜು ಮೈದಾನ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆಯಲಿರುವ ಎರಡು ದಿನಗಳ ಕ್ರೀಡಾ ಉತ್ಸವಕ್ಕೆ ಜಿಲ್ಲೆಯ ರಾಜಕೀಯ, ಆಡಳಿತಾತ್ಮಕ ಹಾಗೂ ಮಾಧ್ಯಮ ಕ್ಷೇತ್ರದ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ ಹಾಗೂ ಉಪಾಧ್ಯಕ್ಷ ನಂಜುಂಡೇಗೌಡ ತಿಳಿಸಿದರು.
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪತ್ರಕರ್ತರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಉತ್ತಮ ಹೊಂದಾಣಿಕೆ, ಸ್ನೇಹಪೂರ್ಣ ಸಂಬಂಧ ಹಾಗೂ ಆರೋಗ್ಯಕರ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಹೇಳಿದರು.
ಈ ಕ್ರೀಡಾ ಸಮ್ಮಿಲನಕ್ಕೆ ಮಾಜಿ ಪ್ರಧಾನಮಂತ್ರಿ ಹಾಗೂ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಗೌರವ ಉಪಸ್ಥಿತಿ ವಹಿಸಲಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಹಿರಿಯ ಪತ್ರಕರ್ತರು ಹಾಗೂ ಜನಪ್ರತಿನಿಧಿಗಳ ಸ್ನೇಹಪೂರ್ಣ ಪಂದ್ಯಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಹಾಸನ ಶಾಸಕ ಹೆಚ್.ಪಿ. ಸ್ವರೂಪ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಾಸನ ಲೋಕಸಭಾ ಕ್ಷೇತ್ರದ ಸಂಸದ ಶ್ರೇಯಸ್ ಎಂ. ಪಟೇಲ್ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ದಿಕ್ಕೂಚಿ ಮಾತುಗಳನ್ನಾಡಲಿದ್ದು, ರಾಜ್ಯ ಉಪಾಧ್ಯಕ್ಷ ಹೆಚ್.ಬಿ. ಮದನ್ ಗೌಡ ಆಶಯ ನುಡಿಗಳ ಮೂಲಕ ಕಾರ್ಯಕ್ರಮದ ಮಹತ್ವ ವಿವರಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಶ್ರವಣಬೆಳಗೊಳ ಶಾಸಕ ಸಿ.ಆರ್. ಬಾಲಕೃಷ್ಣ, ಬೇಲೂರು ಶಾಸಕ ಹೆಚ್.ಕೆ. ಸುರೇಶ್, ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ವಿಧಾನ ಪರಿಷತ್ ಸದಸ್ಯರಾದ ಸೂರಜ್ ರೇವಣ್ಣ, ಮಧು ಜಿ. ಮಾದೇಗೌಡ ಹಾಗೂ ವಿವೇಕಾನಂದ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಲತಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ತಂಡಗಳ ಪರಿಚಯ ಕಾರ್ಯಕ್ರಮ ನಡೆಸಿಕೊಡಲಿದ್ದು, ಜಿಲ್ಲೆಯ ವಿವಿಧ ತಾಲೂಕು ಪತ್ರಕರ್ತರ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಚನ್ನರಾಯಪಟ್ಟಣ, ಬೇಲೂರು, ಅರಸೀಕೆರೆ, ಅರಕಲಗೂಡು, ಹೊಳೆನರಸೀಪುರ, ಆಲೂರು ಹಾಗೂ ಸಕಲೇಶಪುರ ತಾಲೂಕುಗಳ ಪತ್ರಕರ್ತರ ತಂಡಗಳು ಪಂದ್ಯಾವಳಿಯಲ್ಲಿ ಸ್ಪರ್ಧಿಸಲಿವೆ. ಒಟ್ಟು ೧೬ ತಂಡಗಳು ಭಾಗವಹಿಸಲಿದ್ದು, ವಿಜೇತರಿಗೆ ಟ್ರೋಫಿ ಹಾಗೂ ಬಹುಮಾನ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಮೇ ೧೦ರಂದು ಸಂಜೆ ೪ ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಹಾಗೂ ಹೊಳೆನರಸೀಪುರ ಶಾಸಕ ಹೆಚ್.ಡಿ. ರೇವಣ್ಣ ಸಮಾರೋಪ ನುಡಿ ಮಾಡಲಿದ್ದು, ಮಾಜಿ ಸಚಿವ ಹಾಗೂ ಅರಕಲಗೂಡು ಶಾಸಕ ಎ. ಮಂಜು ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಿದ್ದಾರೆ ಎಂದು ಹೇಳಿದರು.
ಕ್ರೀಡಾ ಸಮಿತಿಯಲ್ಲಿ ಜಿಲ್ಲೆಯ ವಿವಿಧ ಮಾಧ್ಯಮ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಹಿರಿಯ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದು, ಮೈದಾನ ಸಿದ್ಧತೆ, ಆಟಗಾರರ ವ್ಯವಸ್ಥೆ ಹಾಗೂ ಪ್ರೇಕ್ಷಕರ ಸೌಲಭ್ಯ ಸೇರಿದಂತೆ ಎಲ್ಲಾ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಜಿ. ಸುರೇಶ್, ಜಿ. ಪ್ರಕಾಶ್, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
