ರಾಮನಾಥಪುರ: ಮನುಷ್ಯ ಬದುಕಿನಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಸಾಗಬೇಕಾದರೆ ಅನೇಕ ಅಡೆತಡೆಗಳು ಸಹಜ. ಅವುಗಳನ್ನು ಭಗವಂತನ ಸ್ಮರಣೆ ಹಾಗೂ ಪ್ರಾಮಾಣಿಕ ಶ್ರಮದ ಮೂಲಕ ಮಾತ್ರ ಮೀರಿ ಗುರಿ ತಲುಪಲು ಸಾಧ್ಯ ಎಂದು ಮಾಜಿ ಸಚಿವರು ಹಾಗೂ ಶಾಸಕರಾದ ಎ. ಮಂಜು ಹೇಳಿದರು.

ರಾಮನಾಥಪುರ ಸಮೀಪದ ವಿ.ಜಿ.ಕೊಪ್ಪಲು ಗ್ರಾಮದಿಂದ ನಂದಿಗೌಡನಕೊಪ್ಪಲು ಮಾರ್ಗವಾಗಿ ಹತ್ತಿಮರದಕೊಪ್ಪಲು ಗ್ರಾಮಕ್ಕೆ ಪೂರ್ಣಕುಂಭ ಕಳಸ, ವೀರಗಾಸೆ, ಕೀಲುಕುದುರೆ, ಡೊಳ್ಳುಕುಣಿತ ಹಾಗೂ ಮಂಗಳವಾದ್ಯಗಳೊಂದಿಗೆ ನಡೆದ ಭವ್ಯ ಮೆರವಣಿಗೆಯಲ್ಲಿ ಪರಮಪೂಜ್ಯ ಡಾ. ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿಯವರು ಗ್ರಾಮ ಪ್ರವೇಶಿಸಿದರು. ಬಳಿಕ ನಡೆದ ತಾಲ್ಲೂಕು ಮಟ್ಟದ ಶ್ರೀ ಭಗೀರಥ ಮಹರ್ಷಿ ಜಯಂತಿ, ಕಂಚಿನ ಪ್ರತಿಮೆ ಅನಾವರಣ, ಪ್ರತಿಭಾ ಪುರಸ್ಕಾರ ಹಾಗೂ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಂಸ್ಕಾರದ ಶಿಕ್ಷಣವನ್ನೂ ಪಡೆದುಕೊಳ್ಳಬೇಕು. ಭಗೀರಥರು ಸಮಸ್ತ ಜನರಿಗೆ ನೀರಿನ ಮಹತ್ವ ಸಾರಿದ ಮಹಾನ್ ವ್ಯಕ್ತಿ ಎಂದು ತಿಳಿಸಿದ ಎ. ಮಂಜು, ತಾಲ್ಲೂಕು ಮಟ್ಟದಲ್ಲಿ ಉಪ್ಪಾರ ಸಮುದಾಯಕ್ಕೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂಬಂಧ ಸರ್ಕಾರದ ನಿಗದಿತ ಹಣ ಪಾವತಿಸಿ ನಿವೇಶನ ನೀಡುವಂತೆ ತಹಶೀಲ್ದಾರ್ ಕೆ.ಸಿ. ಸೌಮ್ಯ ಅವರಿಗೆ ಮನವಿ ಮಾಡಿದರು.

ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಗುರುಪೀಠ ಬ್ರಹ್ಮವಿದ್ಯಾನಗರ ಮದುರೆ ಹೊಸದುರ್ಗದ ಪರಮಪೂಜ್ಯ ಜಗದ್ಗುರು ಡಾ. ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಭಾರತದ ಪವಿತ್ರ ನೆಲದಲ್ಲಿ ಸಂಸ್ಕೃತಿ ಹಾಗೂ ಅಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಮಹಾನ್ ಪುರುಷರು ಜನಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು. ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಮಠ-ಮಾನ್ಯಗಳಿಗೆ ಆರ್ಥಿಕ ಸಹಕಾರ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ ಉಪ್ಪಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಚ್.ಎನ್. ವಿಜಯ್, ರಾಜ್ಯ ಉಪ್ಪಾರ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ವೆಂಕೋಬ, ಭಗೀರಥ ಉಪ್ಪಾರ ಸಮಾಜದ ಅಧ್ಯಕ್ಷ ಎಚ್.ಸಿ. ವೆಂಕಟೇಶ್, ಚಲನಚಿತ್ರ ನಿರ್ಮಾಪಕ ಕೆ.ಆರ್. ಹೊಯ್ಸಳ, ಚಿಕ್ಕಮಗಳೂರು ಡಿವೈಎಸ್ಪಿ ತಿಪ್ಪೇಸ್ವಾಮಿ, ಜಿಎಸ್ಟಿ ತಾಂತ್ರಿಕ ಸದಸ್ಯ ಜಗನ್ನಾಥ ಸಾಗರ, ಅರಕಲಗೂಡು ವಲಯ ಇನ್ಸ್ಪೆಕ್ಟರ್ ವಸಂತ್ ಕುಮಾರ್, ತಹಶೀಲ್ದಾರ್ ಕೆ.ಸಿ. ಸೌಮ್ಯ, ಕೊಣನೂರು ಪಿಎಸ್ಐ ಮರಿಯಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದೇ ವೇಳೆ ಅತಿಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
– ಕುಮಾರಸ್ವಾಮಿ ಎಂ.ಎನ್.
