ರಾಮನಾಥಪುರ: ಕೃಷಿ ಹಾಗೂ ಹೈನುಗಾರಿಕೆ ಕ್ಷೇತ್ರದಲ್ಲಿ ಯುವಕರು ತಂತ್ರಜ್ಞಾನ ಬಳಕೆ ಮತ್ತು ವೈಜ್ಞಾನಿಕ ಕೃಷಿಗೆ ಹೆಚ್ಚಿನ ಒತ್ತು ನೀಡಿದರೆ ಕೃಷಿಯನ್ನೇ ಲಾಭದಾಯಕ ಉದ್ಯಮವಾಗಿ ರೂಪಿಸಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಡಾ. ಎಂ.ಸಿ. ರಂಗಸ್ವಾಮಿ ಅಭಿಪ್ರಾಯಪಟ್ಟರು.
ರಾಮನಾಥಪುರ ಸಮೀಪದ ದೊಡ್ಡಮಗ್ಗೆ ಗ್ರಾಮದ ಮಗ್ಗೆ ಮನೆತನದ ಹಸಿರು ಪ್ಲಾಂಟೇಷನ್ನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬೃಹತ್ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ಕಾರ್ಪೊರೇಟ್ ಉದ್ಯೋಗಗಳ ಹಿಂದೆ ಓಡುವ ಬದಲು ಕೃಷಿಯಲ್ಲಿಯೇ ಭವಿಷ್ಯ ಕಂಡುಕೊಳ್ಳಬೇಕು ಎಂದರು.
“ಇತ್ತೀಚಿನ ದಿನಗಳಲ್ಲಿ ಕೃಷಿ ಮತ್ತು ಹೈನುಗಾರಿಕೆ ಲಾಭದಾಯಕ ಉದ್ಯಮ ಎಂಬ ಅರಿವಿನಿಂದ ಹಲವರು ಮತ್ತೆ ಕೃಷಿಯತ್ತ ಮರಳುತ್ತಿರುವುದು ಉತ್ತಮ ಬೆಳವಣಿಗೆ. ಸಮಗ್ರ ಕೃಷಿ ಪದ್ಧತಿ ಹಾಗೂ ಹೈನುಗಾರಿಕೆಯಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಬೇಕು. ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ (AI) ಅಳವಡಿಸಿಕೊಂಡರೆ ಹೆಚ್ಚಿನ ಲಾಭ ಪಡೆಯಬಹುದು” ಎಂದು ಸಲಹೆ ನೀಡಿದರು.
ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ರೈತರು ಮೇಳದಲ್ಲಿ ಭಾಗವಹಿಸಿದ್ದು, ಕೃಷಿ, ಹೈನುಗಾರಿಕೆ ಹಾಗೂ ಮಾರುಕಟ್ಟೆ ವ್ಯವಸ್ಥೆಗೆ ಸಂಬಂಧಿಸಿದ ವಿವಿಧ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಎಐ ಆಧಾರಿತ ಕೃಷಿ ಮಾಹಿತಿ, ಜೀವಾಮೃತ, ಇಸ್ರೇಲ್ ಮಾದರಿಯ ಹೈನುಗಾರಿಕೆ, ಸಮಗ್ರ ಹಸಿರು ಕೃಷಿ ಪದ್ದತಿ ಸೇರಿದಂತೆ ಹಲವು ಆಕರ್ಷಕ ಪ್ರದರ್ಶನಗಳು ರೈತರ ಗಮನ ಸೆಳೆದವು.

ಮೂಡಿಗೆರೆ ಕಾಫಿ ಮಂಡಳಿ ಅಧ್ಯಕ್ಷ ಎಂ.ಜಿ. ದಿನೇಶ್ ಮಾತನಾಡಿ, “ಭಾರತೀಯ ಕಾಫಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ಹವಾಮಾನ ಆಧಾರಿತ ಬೆಳೆ ನಿರ್ವಹಣೆ ಹಾಗೂ ಗುಣಮಟ್ಟ ಕಾಪಾಡಿಕೊಳ್ಳುವುದು ಮುಖ್ಯ” ಎಂದರು.
ಕಾಫಿ ಅಸೋಸಿಯೇಷನ್ನ ಸುಹಾಸ್ ಮಾತನಾಡಿ, “ಕಾಫಿ ಹಣ್ಣುಗಳನ್ನು ಸರಿಯಾದ ರೀತಿಯಲ್ಲಿ ಒಣಗಿಸಿ ಗುಣಮಟ್ಟ ಹೆಚ್ಚಿಸಬೇಕು” ಎಂದು ಸಲಹೆ ನೀಡಿದರು.
ಹೈನುಗಾರಿಕೆ ಉದ್ಯಮಿ ಶಿರಿನ್ ರಂಗಸ್ವಾಮಿ ಮಾತನಾಡಿ, ಕೃಷಿಯೊಂದಿಗೆ ಹೈನುಗಾರಿಕೆ ಬೆಸೆದರೆ ರೈತರು ಆರ್ಥಿಕವಾಗಿ ಇನ್ನಷ್ಟು ಬಲಿಷ್ಠರಾಗಬಹುದು ಎಂದರು.

ಭಾರತೀಯ ತೋಟಗಾರಿಕೆ ಇಲಾಖೆಯ ನಿವೃತ್ತ ವಿಜ್ಞಾನಿ ನಾರಾಯಣಸ್ವಾಮಿ, ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ, ತಹಸೀಲ್ದಾರ್ ಕೆ.ಸಿ. ಸೌಮ್ಯ, ಪ್ರೊ. ಮಾಯಣ್ಣ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಡಾ. ಎಂ.ಸಿ. ರಂಗಸ್ವಾಮಿ ಅವರನ್ನು ವಿವಿಧ ಕೃಷಿಕ ಸಮಾಜದ ಮುಖಂಡರು ಸನ್ಮಾನಿಸಿದರು. ಕೃಷಿ ವಸ್ತು ಪ್ರದರ್ಶನ ಹಾಗೂ ಹಾಲು ಉತ್ಪನ್ನ ಮಳಿಗೆಗಳಿಗೆ ರೈತರು ಮುಗಿಬಿದ್ದು ವೀಕ್ಷಿಸಿದರು.
– ಕುಮಾರಸ್ವಾಮಿ ಎಂ.ಎನ್.
