ತಿಪಟೂರು : ಹನ್ನೆರಡನೇ ಶತಮಾನದಲ್ಲಿ ದಿಕ್ಕುಗೆಟ್ಟ ಜಗತ್ತಿಗೆ ಜೀವನದರ್ಶನ ಮಾಡಿಸಿದ, ವಿಶ್ವದ ಸಾಹಿತ್ಯ ಸಾಲಿನಲ್ಲಿ ಸಾರ್ವಕಾಲಿಕವಾಗಿ ಅತ್ಯಂತ ಗಟ್ಟಿಯಾಗಿ ನಿಲ್ಲುವಂತಹ ಪ್ರಜಾಸಾಹಿತ್ಯ, ಪ್ರಗತಿಶೀಲ ಸಾಹಿತ್ಯ, ವೈಜ್ಞಾನಿಕ ಸಾಹಿತ್ಯವನ್ನು ನೀಡಿದ್ದು ಬಸವಾದಿ ಶಿವಶರಣರಿಗೆ ಸಲ್ಲುತ್ತದೆ ಎಂದು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ತಿಪಟೂರು ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ವಿಶ್ವದ ಕಾರ್ಮಿಕರೇ ಒಂದಾಗಿ” ದಿನಾಚರಣೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ ಸಮಾಜದ ಎಲ್ಲಾಸ್ಥರದ ಜಂಜಡಗಳಿಗೂ ಬಸವ ಧರ್ಮದಲ್ಲಿ ಔಷಧಿಯಿದೆ. ವರ್ಗರಹಿತವಾಗಿ, ವರ್ಣರಹಿತವಾಗಿ, ಲಿಂಗರಹಿತವಾಗಿ ಸರ್ವಸಮತೆಯ ಸೌಶೀಲ್ಯವಾದ ಬಾಳು ಮನುಕುಲಕ್ಕೆ ಸದಾ ಪ್ರಾಪ್ತವಾಗಬೇಕೆಂಬ ಉನ್ನತ ವಿಚಾರಧಾರೆಗಳನ್ನು ಸರಳವಾಗಿ, ಜನಸಾಮಾನ್ಯರೆದೆಗಿಳಿದು ಅನುಷ್ಠಾನಗೊಳಿಸುವ ಸಾಹಿತ್ಯ ರಚನೆ ಜಾಗತಿಕವಾಗಿ ಯಾವುದಾದರೂ ಇದ್ದರೆ ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನ್ಮತಾಳಿದ ವಚನ ಸಾಹಿತ್ಯ ಮಾತ್ರ ಎನ್ನುವುದು ನಮ್ಮೆಲ್ಲರ ಹೆಮ್ಮೆ ಹಾಗೂ ಪುಣ್ಯ. ಹನ್ನೆರಡನೆಯ ಶತಮಾನದಲ್ಲೇ ಸಾಮಾಜಿಕ ಸಮಾನತೆಗಾಗಿ ಹೋರಾಡಿ ಇವನಾರವ ಇವನಾರವ ಎನ್ನದೇ ವರ್ಣ, ಲಿಂಗ, ಜಾತಿ ಭೇದಗಳನ್ನು ತಿರಸ್ಕರಿಸಿ ಮಾದರಿ ಸಂಸತ್ತನ್ನು ನಿರ್ಮಿಸಿದ ಮಹಾ ಮಾನವತಾವಾದಿ, ಸಾಮಾಜಿಕ ಸುದಾರಕ, ಮೌಢ್ಯಗಳ ವಿರೋಧಿ ಬಸವಣ್ಣನವರನ್ನು ನಿರ್ದಿಷ್ಟ ಜಾತಿಗೆ ಸೀಮಿತಗೊಳಿಸಿ ದೇವರೆಂದು ಪೂಜಿಸುವುದು, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದವರನ್ನೇ ಸ್ಥಾವರವಾಗಿಸುತ್ತಿರುವುದು ವಿಪರ್ಯಾಸ. ಕೈಲಾಸ ದೊಡ್ಡದಲ್ಲ ಕಾಯಕ ದೊಡ್ಡದು, ಧರ್ಮ ದೊಡ್ಡದಲ್ಲ ದಯೆ ದೊಡ್ಡದು, ಅರಿವು ದೊಡ್ಡದಲ್ಲ ಆಚಾರ ದೊಡ್ಡದು, ಅಧಿಕಾರ ದೊಡ್ಡದಲ್ಲ ಅಭಿಮಾನ ದೊಡ್ಡದು, ಆಸ್ತಿ ದೊಡ್ಡದಲ್ಲ ಆರೋಗ್ಯ ದೊಡ್ಡದು, ಸನ್ಮಾನ ದೊಡ್ಡದಲ್ಲ ಸಂಸ್ಕಾರ ದೊಡ್ಡದು, ಹಣ ದೊಡ್ಡದಲ್ಲ ಗುಣ ದೊಡ್ಡದು, ಮನೆ ದೊಡ್ಡದಲ್ಲ ಮನ ದೊಡ್ಡದು, ವಿದ್ಯೆ ದೊಡ್ಡದಲ್ಲ ಅನುಭವ ದೊಡ್ಡದು ಎನ್ನುವ ಸಂದೇಶವನ್ನು ಬೀರಿರುವುದು ಶರಣ ಪರಂಪರೆ ಎಂದರು.

ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಕೆ.ಎಂ. ರಾಜಣ್ಣ ಬಸವಣ್ಣ ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದಾರೆ ಎಂದು ನುಡಿದು ಇಂದು ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಶ್ರಮಜೀವಿ ನಾಗರಾಜು ಪೌರ ಕಾರ್ಮಿಕ ನಗರಸಭೆ ತಿಪಟೂರು ಇವರಿಗೆ ಗೌರವ ಸಮರ್ಪಿಸುತ್ತಿರುವುದು ಸಂಘಕ್ಕೆ ಸಂದ ಗೌರವವಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಂಘದ ಪದಾಧಿಕಾರಿಗಳಿಂದ ವಚನ ಗಾಯನ ನಡೆಯಿತು. ನಂತರ ಸಾಮೂಹಿಕ ನಾಡಗೀತೆಯೊಂದಿಗೆ ಪ್ರಾರಂಭವಾಯಿತು. ನಿವೃತ್ತ ಮುಖ್ಯ ಶಿಕ್ಷಕ ಎಚ್.ಜಿ.ನರಸಿಂಹಮೂರ್ತಿ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಕೆ.ಎಂ.ವಿಶ್ವನಾಥಯ್ಯ ಅನುಭಾವದ ಬಗ್ಗೆ ಚಿಂತನ ನಡೆಸಿಕೊಟ್ಟರು. ಮೆ ಮಾಹೆಯಲ್ಲಿ ಜನಿಸಿದ ನಿವೃತ್ತ ನೌಕರರ ಜನ್ಮ ದಿನದ ಶುಭಾಶಯ ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ಟಿ.ಎ.ಗಂಗಾಧರ್ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಪೌರಕಾರ್ಮಿಕ ನಾಗರಾಜುರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಖಜಾಂಚಿ ಸಿ.ಕುಮಾರ್ ಸಂಘದ ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು.
ನಿವೃತ್ತ ನೌಕರರ ಸಹಕಾರ ಸಂಘದ ಅಧ್ಯಕ್ಷ ವಿ.ಎನ್.ಮಹಾದೇವಯ್ಯ ಸಹಕಾರ ಸಂಘದ ವರದಿ ಮಂಡಿಸಿದರು. ಹೆಚ್.ಜಿ. ನರಸಿಂಹಮೂರ್ತಿ ಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭೆಗೆ ಸಂಘದ ಕಾರ್ಯದರ್ಶಿ ಹಾಗೂ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ.ಆರ್. ಗುರುಸ್ವಾಮಿ ಸ್ವಾಗತಿಸಿ, ನಿವೃತ್ತ ಪ್ರಾಂಶುಪಾಲ ಡಿ.ಎಸ್. ಮರುಳಪ್ಪ ವಂದಿಸಿದರು. ಸಭೆಯಲ್ಲಿ ಕೇಂದ್ರ ಸಾಹಿತ್ಯ ವೇದಿಕೆಯ ತಿಪಟೂರು ತಾಲೂಕು ಅಧ್ಯಕ್ಷರಾದ ಲತಾಮಣಿ ಎಂ.ಕೆ. ಉಪಸ್ಥಿತರಿದ್ದರು.
ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಹೆಚ್.ಎಸ್. ಮಂಜಪ್ಪ ಕಾರ್ಯಕ್ರಮ ನಿರೂಪಿಸಿದರು.
