ಕೊರಟಗೆರೆ: ಕೊರಟಗೆರೆ ತಾಲ್ಲೂಕಿನಲ್ಲಿ ರಾಷ್ಟೀಯ ಕಾಲುಬಾಯಿ ರೋಗ (FMD) ವಿರುದ್ಧದ 9ನೇ ಸುತ್ತಿನ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.
ಪಶುಸಂಗೋಪನಾ ಇಲಾಖೆಯ ವತಿಯಿಂದ ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ಕಾಲುಬಾಯಿ ರೋಗ ನಿಯಂತ್ರಣ ಉದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಸು, ಎಮ್ಮೆ ಸೇರಿದಂತೆ ಸಮಗೋರಸಿನ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ.

ಈ ಅಭಿಯಾನದಲ್ಲಿ ಸುಮಾರು 37,500 ಜಾನುವಾರುಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಇದುವರೆಗೆ 22,127 ಜಾನುವಾರುಗಳಿಗೆ ಯಶಸ್ವಿಯಾಗಿ ಲಸಿಕೆ ಹಾಕಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಲಸಿಕಾ ಕಾರ್ಯಕ್ಕಾಗಿ ಸಿಬ್ಬಂದಿ ಪ್ರತಿದಿನ ಮುಂಜಾನೆ 6 ಗಂಟೆಯಿಂದಲೇ ಮನೆ ಮನೆಗೆ ತೆರಳಿ, ಜಾನುವಾರುಗಳಿದ್ದ ಸ್ಥಳದಲ್ಲೇ ಲಸಿಕೆ ನೀಡುತ್ತಿರುವುದು ರೈತರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ.
ಅಭಿಯಾನದಲ್ಲಿ 10 ಪಶುವೈದ್ಯಾಧಿಕಾರಿಗಳು, 12 ತಾಂತ್ರಿಕ ಸಿಬ್ಬಂದಿ, ಹೊರಗುತ್ತಿಗೆ ಡಿ ದರ್ಜೆ ನೌಕರರು, ಪಶುಸಖಿಯರು ಹಾಗೂ ಮೈತ್ರಿ ಕಾರ್ಯಕರ್ತರು ಸೇರಿ ಒಟ್ಟು 49 ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ. ಸಿಬ್ಬಂದಿಗೆ ಬೇಸಿಗೆಯ ತಾಪಮಾನದಿಂದ ರಕ್ಷಿಸಿಕೊಳ್ಳಲು ಟೋಪಿ, ನೀರಿನ ಬಾಟಲಿ ಹಾಗೂ ಬ್ಯಾಗ್ಗಳನ್ನು ವಿತರಿಸಲಾಗಿದೆ.
ಇದೇ ವೇಳೆ, ಜಾನುವಾರು ಮಾಲೀಕರ ಆಧಾರ್ ಹಾಗೂ ಮೊಬೈಲ್ ಸಂಖ್ಯೆಗೆ ಪಶುಗಳ ಕಿವಿ ಓಲೆ ಸಂಖ್ಯೆಯನ್ನು ಲಿಂಕ್ ಮಾಡಿ ಭಾರತ್ ಪಶುಧನ್ ಯೋಜನೆಯಲ್ಲಿ ದಾಖಲಾತಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆಗೆ ರೈತರು OTP ಹಂಚಿಕೊಳ್ಳುವ ಮೂಲಕ ಇಲಾಖೆಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.
ತಾಲ್ಲೂಕಿನ ದೊಡ್ಡಪಾಲನಹಳ್ಳಿ ಗ್ರಾಮದಲ್ಲಿ ಆಯ್ಕೆ ಮಾಡಲಾದ ಜಾನುವಾರುಗಳಿಂದ ಲಸಿಕೆ ಹಾಕುವ ಮೊದಲು ಹಾಗೂ 15 ದಿನಗಳ ಬಳಿಕ ರಕ್ತದ ಮಾದರಿ ಸಂಗ್ರಹಿಸಿ, ಲಸಿಕೆಯ ಪರಿಣಾಮಕಾರಿತ್ವವನ್ನು ಪರಿಶೀಲಿಸುವ ಕಾರ್ಯವೂ ನಡೆಯುತ್ತಿದೆ.
ಜಿಲ್ಲಾ ಉಪನಿರ್ದೇಶಕರಾದ ಡಾ. ಶಿವಪ್ರಸಾದ್ ಹೆಚ್.ಎಂ. ಅವರೊಂದಿಗೆ ಮುಖ್ಯ ಪಶುವೈದ್ಯಾಧಿಕಾರಿ (ಆಡಳಿತ) ಡಾ. ಸುಧಾಕರ್ ಎಂ.ಎಲ್. ಲಸಿಕಾ ಪ್ರಗತಿಯನ್ನು ಪರಿಶೀಲಿಸಿ ಸಿಬ್ಬಂದಿಗೆ ಉತ್ತೇಜನ ನೀಡಿದರು.
ಕಾಲುಬಾಯಿ ರೋಗವು ಜಾನುವಾರುಗಳಲ್ಲಿ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಹಾಲು ಉತ್ಪಾದನೆ ಕುಸಿತ, ದೈಹಿಕ ದುರ್ಬಲತೆ ಹಾಗೂ ರೈತರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತದೆ. ಆದ್ದರಿಂದ ಎಲ್ಲಾ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಪಶುಸಂಗೋಪನಾ ಇಲಾಖೆ ಮನವಿ ಮಾಡಿದೆ.
ತಾಲ್ಲೂಕಿನ ರೈತರಿಂದ ಉತ್ತಮ ಸಹಕಾರ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅಭಿಯಾನ ಯಶಸ್ವಿಯಾಗಿ ಸಾಗುತ್ತಿದ್ದು, ಜಾನುವಾರುಗಳ ಆರೋಗ್ಯ ರಕ್ಷಣೆ ಹಾಗೂ ರೈತರ ಆರ್ಥಿಕ ಭದ್ರತೆಗೆ ಇದು ನೆರವಾಗಲಿದೆ .ಡಾ. ಸುಧಾಕರ್ ಎಂ.ಎಲ್ . ಸಹಾಯಕ ನಿರ್ದೇಶಕರು ಪಶುಸಂಗೋಪನಾ ಇಲಾಖೆ, ಕೊರಟಗೆರೆ ತಾಲ್ಲೂಕು.
