ರಾಮನಾಥಪುರ, ಮೇ 25: ಕರ್ನಾಟಕ ಶಾಸ್ತ್ರೀಯ ಸಂಗೀತವು ಪ್ರಪಂಚದ ಐತಿಹಾಸಿಕ ಸಂಗೀತ ಪರಂಪರೆಯ ಪ್ರಮುಖ ಅಂಗವಾಗಿದ್ದು, ಜಗತ್ತಿನ ವಿವಿಧ ಸಂಸ್ಕೃತಿಗಳೊಂದಿಗೆ ಬೆರೆತು ಆತ್ಮೀಯತೆಯನ್ನು ಮೂಡಿಸುವ ಶಕ್ತಿಯನ್ನು ಹೊಂದಿದೆ ಎಂದು ಖ್ಯಾತ ವಿದ್ವಾನ್ ಡಾ. ಮೈಸೂರು ಮಂಜುನಾಥ್ ಅಭಿಪ್ರಾಯಪಟ್ಟರು.
ರಾಮನಾಥಪುರ ಹೋಬಳಿಯ ಸಂಗೀತ ಗ್ರಾಮ ರುದ್ರಪಟ್ಟಣದ ಶ್ರೀರಾಮ ಮಂದಿರದಲ್ಲಿ ಆಯೋಜಿಸಿದ್ದ ಐದು ದಿನಗಳ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 23 ವರ್ಷಗಳಿಂದ ಸಂಗೀತ ಸಾಧನೆಯನ್ನು ನಿರಂತರವಾಗಿ ಸಾಗಿಸಿಕೊಂಡು ಬರುತ್ತಿರುವ ಸಂಗೀತ ವಿದ್ವಾನ್ ಡಾ. ಅರ್.ಕೆ. ಪದ್ಮನಾಭ ಅವರ ಸೇವೆಯನ್ನು ಶ್ಲಾಘಿಸಿದರು.

ರುದ್ರಪಟ್ಟಣದಂತಹ ಗ್ರಾಮೀಣ ವಾತಾವರಣದಲ್ಲೇ ಕರ್ನಾಟಕ ಸಂಗೀತವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿರುವ ಡಾ. ಅರ್.ಕೆ. ಪದ್ಮನಾಭ ಅವರು ಕರ್ನಾಟಕದ ಅಮೂಲ್ಯ ಸಂಗೀತ ನಿಧಿಯಾಗಿದ್ದಾರೆ ಎಂದ ಅವರು, ವಾದಿರಾಜರ ಆರಾಧಕರಾಗಿರುವ ಪದ್ಮನಾಭ ಅವರ ಜೀವನದಲ್ಲಿ ಅಧ್ಯಾತ್ಮ, ಕಲೆ, ಕೃಷಿ ಹಾಗೂ ಜೀವನದರ್ಶನ ಒಂದಾಗಿ ಬೆರೆತಿರುವುದು ವಿಶೇಷ ಎಂದರು.

ಸಂಗೀತವು ಕೇವಲ ಕಲೆಯಲ್ಲ, ಅದು ಸಂಸ್ಕೃತಿಗಳನ್ನು ಸಂಪರ್ಕಿಸುವ ಸೇತುವೆಯಾಗಿದೆ. ಜಗತ್ತಿನ ಮೂಲೆಮೂಲೆಗಳಲ್ಲಿ ಸ್ಥಳೀಯ ಸಂಸ್ಕೃತಿಗಳೊಂದಿಗೆ ಬೆರೆತು ಜನಮನ ಗೆಲ್ಲುವ ಶಕ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕಿದೆ ಎಂದು ಡಾ. ಮೈಸೂರು ಮಂಜುನಾಥ್ ಹೇಳಿದರು.

ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ಡಾ. ಅರ್.ಕೆ. ಪದ್ಮನಾಭ ಸೇರಿದಂತೆ ಹಲವು ಗಣ್ಯರು ಹಾಗೂ ಸಂಗೀತಾಸಕ್ತರು ಉಪಸ್ಥಿತರಿದ್ದರು.
