ರಾಮನಾಥಪುರ, ಜು. 26: ನಾಡು ಕಂಡ ಮಹಾನ್ ನಾಯಕ, ವಿಶ್ವಮಾನ್ಯ ದಾರ್ಶನಿಕ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿದ್ದು, ಅವರ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಾಸನ ಆದಿಚುಂಚನಗಿರಿ ಮಠದ ಶ್ರೀ ಶಂಭುನಾಥ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಕಾವ್ಯಾಂಜಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ 517ನೇ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಬೆಂಗಳೂರನ್ನು ಯೋಜಿತ ನಗರವನ್ನಾಗಿ ರೂಪಿಸಿ, ಸುಸಜ್ಜಿತ ಮಾರುಕಟ್ಟೆಗಳನ್ನು ನಿರ್ಮಿಸಿ ಜನಕಲ್ಯಾಣದ ಕನಸು ಕಂಡ ಮಹಾನ್ ನಾಯಕ ಕೆಂಪೇಗೌಡರ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿಯಾಗಿವೆ. ಸಮಾಜ ಮತ್ತು ವಿವಿಧ ಸಂಘಟನೆಗಳು ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಎ. ಮಂಜು, ಸಮಾಜದ ಅಭಿವೃದ್ಧಿಗೆ ತಾವು ಸದಾ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದರು. “ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ. ಸಮಾಜದ ಪ್ರಗತಿಗೆ ಅಗತ್ಯವಿರುವ ಎಲ್ಲ ಸಹಕಾರವನ್ನು ನೀಡುತ್ತೇನೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಕೆ.ಎಂ. ಮೋಹನ್, ದೊಡ್ಡಮಗ್ಗೆ ಎಂ.ಟಿ. ಕೃಷ್ಣೇಗೌಡ, ಹೊಡೆನೂರು ಪಿ. ಶ್ರೀಧರಗೌಡ, ಪ್ರಗತಿಪರ ರೈತ ಎಂ.ಸಿ. ರಂಗಸ್ವಾಮಿ, ರಘು, ಹಾಕಿ ಆಟಗಾರ್ತಿ ಕು. ಜೆ. ಚಂದನ, ರಾಜ್ಯಮಟ್ಟದ ವಿಜೇತೆ ಹಂಪಾಪುರ ವರ್ಷ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
– ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
