ನವದೆಹಲಿ: ದೇಶದ ಪ್ರಮುಖ ದೂರಸಂಪರ್ಕ ಸಂಸ್ಥೆಯಾದ Bharti Airtel ತನ್ನ ಗ್ರಾಹಕರಿಗಾಗಿ ಹೊಸ “Airtel Priority Postpaid” ಸೇವೆಯನ್ನು ಪ್ರಾರಂಭಿಸಿದೆ. ಗಿಜಿಗುಡಿದ ಮಾರುಕಟ್ಟೆಗಳು, ಟ್ರಾಫಿಕ್ ಜಾಮ್ಗಳು ಹಾಗೂ ಜನಸಂದಣಿ ಹೆಚ್ಚಿರುವ ಕಾರ್ಯಕ್ರಮಗಳ ನಡುವೆಯೂ ಗ್ರಾಹಕರು ನಿರಂತರ ಹಾಗೂ ಗುಣಮಟ್ಟದ 5G ಸಂಪರ್ಕವನ್ನು ಪಡೆಯುವ ಉದ್ದೇಶದಿಂದ ಈ ಸೇವೆಯನ್ನು ಪರಿಚಯಿಸಲಾಗಿದೆ.
ಈ ಕುರಿತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ Shashwat Sharma ಗ್ರಾಹಕರಿಗೆ ಬರೆದ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
“ವೀಡಿಯೋ ಕಾಲ್, ಇಮೇಲ್ ಡೌನ್ಲೋಡ್ ಅಥವಾ ಫೋಟೋ ಅಪ್ಲೋಡ್ ಮಾಡುವ ಸಂದರ್ಭಗಳಲ್ಲಿ ಜನಸಂದಣಿ ಪ್ರದೇಶಗಳಲ್ಲಿ ಗ್ರಾಹಕರು ಎದುರಿಸುವ ಸಮಸ್ಯೆಗಳನ್ನು ಮನಗಂಡು ಈ ಹೊಸ ಸೇವೆಯನ್ನು ರೂಪಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಈ ಸೇವೆಗೆ ಮೂಲವಾಗಿರುವುದು ಏರ್ಟೆಲ್ನ 5G ನೆಟ್ವರ್ಕ್ನಲ್ಲಿ ಅಳವಡಿಸಲಾದ “Network Slicing” ತಂತ್ರಜ್ಞಾನ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಈ ತಂತ್ರಜ್ಞಾನವನ್ನು ಭಾರತದಲ್ಲಿಯೂ ಪರಿಚಯಿಸಿರುವುದಾಗಿ ಸಂಸ್ಥೆ ಹೇಳಿದೆ. ಇದರ ಮೂಲಕ ಪೋಸ್ಟ್ಪೇಯ್ಡ್ ಗ್ರಾಹಕರಿಗೆ ಪ್ರಾಥಮಿಕ ನೆಟ್ವರ್ಕ್ ಸಾಮರ್ಥ್ಯವನ್ನು ಒದಗಿಸಲಾಗುತ್ತದೆ.
ಏರ್ಟೆಲ್ ಪೋಸ್ಟ್ಪೇಯ್ಡ್ ಯೋಜನೆಗಳಲ್ಲಿ ಇರುವ ಗ್ರಾಹಕರು ಈ ಸೇವೆಯನ್ನು ಸ್ವಯಂಚಾಲಿತವಾಗಿ ಪಡೆಯಲಿದ್ದು, ಪ್ರೀಪೇಯ್ಡ್ ಬಳಕೆದಾರರು Airtel App ಅಥವಾ ಸಮೀಪದ ಏರ್ಟೆಲ್ ಮಳಿಗೆಗೆ ಭೇಟಿ ನೀಡಿ ಪೋಸ್ಟ್ಪೇಯ್ಡ್ಗೆ ಬದಲಾಯಿಸಬಹುದು ಎಂದು ಕಂಪನಿ ತಿಳಿಸಿದೆ.
ಈ ಸೇವೆಯನ್ನು ಬಳಸಲು 5G SA (Stand Alone) ಸೌಲಭ್ಯ ಹೊಂದಿರುವ ಸ್ಮಾರ್ಟ್ಫೋನ್ ಅಗತ್ಯವಿದ್ದು, ಮೊಬೈಲ್ನಲ್ಲಿ ಇತ್ತೀಚಿನ ಸಾಫ್ಟ್ವೇರ್ ಅಪ್ಡೇಟ್ ಇರಬೇಕಾಗಿದೆ. Airtel App ಮೂಲಕವೂ ಫೋನ್ ಸಿದ್ಧತೆಯನ್ನು ಪರಿಶೀಲಿಸಬಹುದಾಗಿದೆ ಎಂದು ಕಂಪನಿ ಮಾಹಿತಿ ನೀಡಿದೆ.
