ಹೊಳೆನರಸೀಪುರ, ಮೇ 25: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ಹಾಗೂ ಹಾಸನ ಜಿಲ್ಲಾ ಘಟಕ ಮತ್ತು ಕದಂಬ ಸೇನೆ ಹೊಳೆನರಸೀಪುರ ತಾಲ್ಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ರಾಮೇನಹಳ್ಳಿಯ ಕಲ್ಕಿ ಪರಂಜ್ಯೋತಿ ದೇವಸ್ಥಾನದಲ್ಲಿ ರಾಜ್ಯ ಮಟ್ಟದ ಕವಿಗೋಷ್ಠಿ, ರಂಗಗೀತೆ ಹಾಗೂ ಖ್ಯಾತ ನಾಟಕಕಾರ ಬಿ. ಪುಟ್ಟಸ್ವಾಮಯ್ಯ ಅವರ ಬದುಕು-ಬರಹ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಮೇ 24ರಂದು ಆಯೋಜಿಸಲಾಗಿದೆ.
ಅರಕಲಗೂಡು ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಎ. ಮಂಜು ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ.
ದಿವಂಗತ ನಾಟಕಕಾರ ಬಿ. ಪುಟ್ಟಸ್ವಾಮಯ್ಯ ಅವರ 129ನೇ ಜನ್ಮದಿನ ಪುಣ್ಯಸ್ಮರಣೆಯ ಅಂಗವಾಗಿ ಅವರ ಬದುಕು-ಬರಹ ಕುರಿತು ಕವಿ ಹಾಗೂ ನಾಟಕಕಾರ ಗೊರೂರು ಅನಂತರಾಜು ಉಪನ್ಯಾಸ ನೀಡಲಿದ್ದಾರೆ.
“ಛಲದೊಳ್ ದುರ್ಯೋಧನಂ” ನಾಟಕದ ಕುರಿತು ಎಸ್.ಎಸ್. ಪುಟ್ಟೇಗೌಡ ಅವರ ಕೃತಿಯನ್ನು ಆಧರಿಸಿ ಪ್ರೊ. ಎ.ಎಚ್. ಗಣೇಶ್ ಅಂಕಪುರ ಮಾತನಾಡಲಿದ್ದು, “ಕುರುಕ್ಷೇತ್ರ” ನಾಟಕ ಕುರಿತು ಉಪನ್ಯಾಸಕ ಡಾ. ಬರಾಳು ಶಿವರಾಮ ಚನ್ನರಾಯಪಟ್ಟಣ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮವನ್ನು ಮಧು ನಾಯ್ಕ ಲಂಬಾಣಿ ಉದ್ಘಾಟಿಸಲಿದ್ದು, ಪ್ರಾಸ್ತಾವಿಕ ನುಡಿಯನ್ನು ಕದಂಬ ಸೇನೆ ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷ ರಾಮೇನಹಳ್ಳಿ ಪುಟ್ಟಸ್ವಾಮಿಗೌಡ ನೀಡಲಿದ್ದಾರೆ.
ಶುಭಾಶಯ ಭಾಷಣವನ್ನು ಸುಂದರೇಶ್ ಡಿ ಉಡುಗೊರೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಶ್ರುತಿಕುಮಾರ್, ಬೇಕ್ರಿ ರಮೇಶ್, ಬಾ.ನಂ. ಲೋಕೇಶ್, ಕವಿ ಎನ್.ಎಲ್. ಚನ್ನೇಗೌಡ, ಡಾ. ಲೋಕೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಸಿ.ಆರ್. ವಿಜಯಕುಮಾರ್ ವಹಿಸಲಿದ್ದು, ದಿಬ್ಬೂರು ರಮೇಶ್ ಪ್ರಾರ್ಥನೆ ನೆರವೇರಿಸಲಿದ್ದಾರೆ. ಸ್ವಾಗತವನ್ನು ಕೇಶವ ಜಿ.ಜಿ. ಹಾಗೂ ವಂದನಾರ್ಪಣೆಯನ್ನು ಬೇಕ್ರಿ ರಾಜೇಗೌಡ ಮಾಡಲಿದ್ದಾರೆ.
ರಂಗಗೀತೆ ಗಾಯನ ಹಾಗೂ ಕವಿಗೋಷ್ಠಿಗೆ 60ಕ್ಕೂ ಹೆಚ್ಚು ಗಾಯಕರು ಮತ್ತು ಕವಿಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವುದಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಆರ್. ವಿಜಯಕುಮಾರ್ ತಿಳಿಸಿದ್ದಾರೆ.
