ಕೊರಟಗೆರೆ :- ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಜಾರಿಗೊಂಡಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆ ಕೊರಟಗೆರೆ ತಾಲೂಕಿನ ಹಲವೆಡೆ ಗಂಭೀರ ಅವ್ಯವಸ್ಥೆ, ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರದ ಆರೋಪಗಳಲ್ಲಿ ಸಿಲುಕಿದೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದೆ. ವಿಶೇಷವಾಗಿ ಹೊಳವನಹಳ್ಳಿ ಹೋಬಳಿಯ ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ಜನರು ನೀರಿಗಾಗಿ ಪರದಾಡುತ್ತಿರುವುದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ತಾಲೂಕಿನ ಹೊಳವನಹಳ್ಳಿ,ಅರಸಾಪುರ ಅಕ್ಕಿ ರಾಂಪುರ, ಬೈಚಾಪುರ, ಬಿಡಿಪುರ, ವಡ್ಡಗೆರೆ ಹಾಗೂ ತುಂಬಾಡಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆ ಸಮರ್ಪಕವಾಗಿ ಜಾರಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಹಲವೆಡೆ ಪೈಪ್ಲೈನ್ ಅಳವಡಿಕೆ ಕೆಲಸ ಅರ್ಧದಲ್ಲೇ ನಿಂತಿದ್ದು, ಮನೆಮನೆಗೆ ನೀರು ತಲುಪಿಸುವ ಭರವಸೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ವಿಶೇಷವಾಗಿ ಅರಸಾಪುರ ಗ್ರಾಮ ಪಂಚಾಯಿತಿಯ ಏಕೆ ಕಾಲೋನಿಯಲ್ಲಿ ಕಳೆದ ಆರು ವರ್ಷಗಳಿಂದಲೂ ಜೆಜೆಎಂ ಯೋಜನೆಯಡಿ ಶುದ್ಧ ಕುಡಿಯುವ ನೀರು ಸಿಗದೇ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಗ್ರಾಮದ ಅನೇಕ ಕಡೆಗಳಲ್ಲಿ ನೀರಿನ ಪೈಪ್ಗಳಲ್ಲಿ ಸೋರಿಕೆ ಉಂಟಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಕಳಪೆ ಗುಣಮಟ್ಟದ ಕಾಮಗಾರಿಯಿಂದ ಅನೇಕ ಸ್ಟ್ಯಾಂಡ್ಪೋಸ್ಟ್ಗಳು ಉದುರಿ ಬಿದ್ದಿದ್ದು, ಸಾರ್ವಜನಿಕ ಹಣ ವ್ಯರ್ಥವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರಾಯವಾರ ಗ್ರಾಮ ಹಾಗೂ ಏಕೆ ಕಾಲೋನಿಯಲ್ಲೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ದೂರದ ಪ್ರದೇಶಗಳಿಂದ ನೀರು ತರುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. “ಮನೆಮನೆ ಗಂಗೆ” ಎಂಬ ಘೋಷಣೆ ಕೇವಲ ಕಾಗದದಲ್ಲೇ ಉಳಿದಿದೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
ಜೆಜೆಎಂ ಕಾಮಗಾರಿಗಾಗಿ ಹಲವೆಡೆ ಸಿಸಿ ರಸ್ತೆಗಳನ್ನು ಅಗೆದು ಪೈಪ್ ಅಳವಡಿಕೆ ಮಾಡಲಾಗಿದ್ದು, ಬಳಿಕ ರಸ್ತೆಗಳನ್ನು ಗುಣಮಟ್ಟವಿಲ್ಲದೆ ಮುಚ್ಚಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಮಳೆ ಬಂದಾಗ ರಸ್ತೆಗಳು ಕುಸಿದು ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಗುತ್ತಿಗೆದಾರರು ಹಣದಾಸೆಗೆ ಕಾಮಗಾರಿ ನಡೆಸಿ ಸಾರ್ವಜನಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ.
ಕಾಮಗಾರಿಗಳ ಮೇಲ್ವಿಚಾರಣೆ ನಡೆಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ಜೊತೆಗೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಡುವಿನ ಕಮಿಷನ್ ವ್ಯವಹಾರದಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತುಗಳು ಗ್ರಾಮಗಳಲ್ಲಿ ಕೇಳಿಬರುತ್ತಿವೆ.
ಜೆಜೆಎಂ ಯೋಜನೆಯ ಹೆಸರಿನಲ್ಲಿ ನಡೆದಿರುವ ಎಲ್ಲಾ ಕಾಮಗಾರಿಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಒಟ್ಟಾರೆ, ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವದ ಯೋಜನೆ ಕೊರಟಗೆರೆ ತಾಲೂಕಿನ ಅನೇಕ ಭಾಗಗಳಲ್ಲಿ ನಿರೀಕ್ಷಿತ ಫಲ ನೀಡದೆ ಅವ್ಯವಸ್ಥೆಯ ಗೂಡಾಗಿ ಪರಿಣಮಿಸಿದ್ದು, ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಜನರಿಂದ ಕೇಳಿಬರುತ್ತಿದೆ.
– ಶ್ರೀನಿವಾಸ್ ಕೊರಟಗೆರೆ.
