ಕೆ.ಆರ್.ಪೇಟೆ,ಮೇ.26: ಕೆರೆ-ಕಟ್ಟೆಗಳ ಅಭಿವೃದ್ಧಿಯಿಂದ ಅಂತರ್ಜಲ ವೃದ್ದಿಯಾಗುತ್ತದೆ. ಈ ಮೂಲಕ ರೈತರ ಕೃಷಿ ಕೊಳವೆ ಬಾವಿಗಳು ಹಾಗೂ ಕುಡಿಯುವ ನೀರಿನ ಜಲಮೂಲಗಳಿಗೆ ಅನುಕೂಲವಾಗುತ್ತದೆ ಎಂದ ಶಾಸಕ ಹೆಚ್.ಟಿ.ಮಂಜು ಹೇಳಿದರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿಯ ಹರಳಹಳ್ಳಿ ಗ್ರಾಮದ ಜಮಾಬಂದಿಗೆ ಸೇರಿದ ಮಜ್ಜನಕಟ್ಟೆಯ ಅಭಿವೃದ್ಧಿಗೆ ಸುಮಾರು 1 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕೆರೆಗಳು ಮಾನವನಿಗೆ ಮತ್ತು ಪರಿಸರಕ್ಕೆ ನೀರು ಒದಗಿಸುವ ನೈಸರ್ಗಿಕ ಹಾಗೂ ಕೃತಕ ಜಲಾಶಯಗಳಾಗಿವೆ. ಇವು ಅಂತರ್ಜಲ ಹೆಚ್ಚಿಸಲು, ಕೃಷಿಗೆ ನೀರೊದಗಿಸಲು, ಜಲಚರಗಳ ಸಂರಕ್ಷಣೆಗೆ ಮತ್ತು ಜೀವವೈವಿಧ್ಯತೆಯನ್ನು ಕಾಪಾಡಲು ಅತ್ಯಂತ ಅವಶ್ಯಕವಾಗಿವೆ. ಕೆರೆಗಳು ರೈತರ ಜೀವನಾಡಿಯಾಗಿದ್ದು, ಮಳೆಗಾಲದಲ್ಲಿ ಸಂಗ್ರಹವಾದ ನೀರು ಹೊಲ, ಗದ್ದೆ ಮತ್ತು ತೋಟಗಳಿಗೆ ನೀರಾವರಿಯಾಗಿ ಬಳಕೆಯಾಗುತ್ತದೆ. ಕೆರೆಯಲ್ಲಿ ನೀರು ನಿಲ್ಲುವುದರಿಂದ ಅದು ನಿಧಾನವಾಗಿ ಭೂಮಿಗೆ ಇಂಗುತ್ತದೆ. ಇದರಿಂದ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತದೆ. ಹಳ್ಳಿಗಳಲ್ಲಿ ದನ, ಕರು, ಕುರಿ ಮುಂತಾದ ಪ್ರಾಣಿಗಳಿಗೆ ಕುಡಿಯುವ ನೀರನ್ನು ಒದಗಿಸುವಲ್ಲಿ ಕೆರೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆರೆ-ಕಟ್ಟೆಗಳು ಪಕ್ಷಿಗಳಿಗೆ ಆವಾಸಸ್ಥಾನವಾಗಿದ್ದು, ಪರಿಸರದ ತಾಪಮಾನವನ್ನು ನಿಯಂತ್ರಿಸಲು ಮತ್ತು ಹವಾಮಾನ ಬದಲಾವಣೆಯನ್ನು ತಡೆಯಲು ಸಹಾಯ ಮಾಡುತ್ತವೆ. ಮೀನು ಸಾಕಾಣಿಕೆಗೆ ಕೆರೆಗಳು ಅತ್ಯುತ್ತಮ ಸ್ಥಳವಾಗಿದ್ದು ಇದು ಸ್ಥಳೀಯರಿಗೆ ಉದ್ಯೋಗ ಮತ್ತು ಆದಾಯದ ಮೂಲವನ್ನು ಒದಗಿಸುತ್ತದೆ. ಕೆರೆಗಳು ನಮ್ಮ ಜಲಸಂಪತ್ತಿನ ಬೆನ್ನೆಲುಬಾಗಿವೆ. ಪ್ರಾಚೀನ ಕಾಲದಿಂದಲೂ ಕೆರೆಗಳ ನಿರ್ಮಾಣ ಮತ್ತು ಸಂರಕ್ಷಣೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಇಂದಿನ ದಿನಗಳಲ್ಲಿ ನಗರೀಕರಣ ಹಾಗೂ ಮಾಲಿನ್ಯದಿಂದ ಕೆರೆಗಳು ಕಲುಷಿತಗೊಳ್ಳುತ್ತಿವೆ. ಆದ್ದರಿಂದ ಕೆರೆಗಳನ್ನು ಸಂರಕ್ಷಿಸಿ, ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ.
ಈ ನಿಟ್ಟಿನಲ್ಲಿ ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿ ನಮ್ಮ ಹರಳಹಳ್ಳಿ ಗ್ರಾಮದ ಮಜ್ಜನ ಕೆರೆ ಅಭಿವೃದ್ಧಿಗೆ ಸುಮಾರು 1 ಕೋಟಿ ರೂಪಾಯಿಗಳ ಅನುಧಾನ ನೀಡಲಾಗಿದೆ. ಈ ಕೆರೆಯಲ್ಲಿ ನಾನು ಚಿಕ್ಕವನಾಗಿದ್ದ ಸಮಯದಲ್ಲಿ ದನ-ಎಮ್ಮೆ ಮೇಯಿಸಿಕೊಂಡು ನೀರು ಕುಡಿಸಲು ಉಪಯೋಗಿಸುತ್ತಿದ್ದ ಕೆರೆಯಾಗಿದೆ. ಹಾಗಾಗಿ ಈ ಕೆರೆಯ ಅಭಿವೃದ್ಧಿಗೆ ನೀಡಿರುವ ಅನುಧಾನ ಸಾಲದೇ ಇದ್ದಲ್ಲಿ ಮತ್ತಷ್ಟು ಅನುಧಾನವನ್ನು ನೀಡುತ್ತೇನೆ. ಗುತ್ತಿಗೆದಾರರು ಕೆರೆಯ ಹೂಳೆತ್ತಿ, ಏರಿ ಅಭಿವೃದ್ದಿ ಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕರುಣಾಕರ್, ಶಂಕರೇಗೌಡ, ರಾಮೇಗೌಡ, ಮಹೇಶ್, ಈಶ್ಚರ್, ಶಿವರಾಂ, ವಿನಯ್, ಕುಮಾರಸ್ವಾಮಿ, ಯಶ್ವಂತ್, ರಾಕೇಶ್, ರಾಮೇಗೌಡ, ಚಂದ್ರಶೇಖರ್, ಹರಳಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ರಾಯಸಮುದ್ರ ಯೋಗೇಶ್, ಶಾಸಕರ ಆಪ್ತ ಸಹಾಯಕ ಧ್ರುವಕುಮಾರ್, ಮರಡಹಳ್ಳಿ ಪ್ರದೀಪ್ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
