ಕೆ.ಆರ್.ಪೇಟೆ: ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು, ಶಿಕ್ಷಕರು ಜವಾಬ್ದಾರಿಯಿಂದ ಕೆಲಸ ಮಾಡುವ ಮೂಲಕ ಸರ್ಕಾರಿ ಶಾಲೆಗಳ ಉಳಿವಿಗೆ ಪ್ರಯತ್ನಿಸಬೇಕು. ಅದೇ ರೀತಿ ಪೋಷಕರು ಸಹ ತಮ್ಮಲ್ಲಿನ ಖಾಸಗಿ ಶಾಲೆಯ ವ್ಯಾಮೋಹವನ್ನು ದೂರಮಾಡಿ ತಮ್ಮ ಮಕ್ಕಳನ್ನು ತಮ್ಮ ಗ್ರಾಮದ ಸರ್ಕಾರಿ ಶಾಲೆಗೆ ದಾಖಲು ಮಾಡುವ ಮೂಲಕ ಬಡವರ ಜ್ಞಾನ ಕೇಂದ್ರಗಳಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳಬೇಕು ಎಂದು ತಾಲ್ಲೂಕಿನ ಆಧ್ಯಾತ್ಮಿಕ ಹಾಗೂ ಸಾಮಾಜಿಕ ಚಿಂತಕ ಗೋಪಾಲಕೃಷ್ಣ ಆವಧಾನಿ ಅವರು ಹೇಳಿದರು.
ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಬೆಡದಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರು ಮತ್ತು ಶಿಕ್ಷಕರ ಮಹಾಸಭೆ ಕಾರ್ಯಕ್ರಮದಲ್ಲಿ ಶಾಲೆಗೆ ದಾಖಲಾದ 15ಮಕ್ಕಳಿಗೂ ಸರಸ್ವತಿ ದೇವಿ ಮತ್ತು ಹಯಗ್ರೀವ ಮಂತ್ರವನ್ನು ಹೇಳಿಕೊಡುವ ಮೂಲಕ ಅಕ್ಷರ ಕಲಿಕಾ ಕಾರ್ಯಕ್ರಮಕ್ಕೆ ಶಾರದಾ ದೇವಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಉಚಿತ ಶಿಕ್ಷಣ ಪಡೆದುಕೊಳ್ಳಲು ಸರ್ಕಾರವು ಕೋಟ್ಯಂತರ ರೂಪಾಯಿಗಳನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋಧನೆ, ಬಿಸಿಯೂಟ, ಸಮವಸ್ತç, ಪಠ್ಯಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ಸರ್ಕಾರವು ನೀಡುತ್ತಿದೆ. ಇಷ್ಟೆಲ್ಲಾ ಸೌಲಭ್ಯಗಳನ್ನು ಒದಗಿಸಿದ್ದರೂ ದಾಖಲಾತಿ ಪ್ರಮಾಣ ಕಡಿಮೆಯಾಗುತ್ತಿರುವುದಕ್ಕೆ ಪೋಷಕರ ಇಂಗ್ಲೀಷ್ ಮತ್ತು ಕಾನ್ವೆಂಟ್ ವ್ಯಾಮೋಹವೇ ಕಾರಣವಾಗಿದೆ. ಇದನ್ನು ಮನಗಂಡು ಸರ್ಕಾರವು ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಯ ಜೊತೆಗೆ ಇಂಗ್ಲೀಷ್ ಕಲಿಸಲು ಅವಕಾಶ ಕಲ್ಪಿಸಿದೆ ಹಾಗಾಗಿ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ದೃಷ್ಠಿಯಿಂದ ತಮ್ಮ ಗ್ರಾಮದ ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಕೊಡಿಸಬೇಕು ಎಂದು ಸಲಹೆ ನೀಡಿದರು.

ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಶ್ರೀ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ರುದ್ರಮುನಿ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ ಸರ್ಕಾರಿ ಶಾಲೆಯನ್ನು ಉಳಿಸಲು ಬೆಡದಹಳ್ಳಿ ಗ್ರಾಮಸ್ಥರು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಒಂದು ಶಾಲೆಯು ಮುಚ್ಚಿದರೆ ಇಡೀ ಗ್ರಾಮದ ಸೌಂದರ್ಯವೇ ಹಾಳಾಗುತ್ತದೆ. ಮಕ್ಕಳ ಕಲರವ ಇಲ್ಲದಿದ್ದರೆ ಗ್ರಾಮದಲ್ಲಿ ಸ್ಮಶಾನ ಮೌನದಂತಹ ವಾತಾವರಣ ಸೃಷ್ಠಿಯಾಗುತ್ತದೆ. ಮುಚ್ಚಿದ ಶಾಲೆಯನ್ನು ನೋಡಿದರೆ ಎಲ್ಲರಿಗೂ ದುಃಖ ಉಮ್ಮಳಿಸಿ ಬರುತ್ತದೆ ಹಾಗಾಗಿ ಬೆಡದಹಳ್ಳಿ ಗ್ರಾಮಸ್ಥರು ಇದಕ್ಕೆ ಅವಕಾಶ ಮಾಡಿಕೊಡದೇ, ಬೇರೆ ಬೇರೆ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ಕೆರೆತಂದು ತಮ್ಮೂರಿನ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಮುಚ್ಚಿ ಹೋಗುವ ಹಂತಕ್ಕೆ ಬಂದಿದ್ದ ಸರ್ಕಾರಿ ಶಾಲೆಯನ್ನು ಉಳಿಸಿಕೊಂಡಿರುವುದು ಎಲ್ಲರೂ ಮೆಚ್ಚುವಂತಹ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮದ ಯುವಕರು, ಹಿರಿಯ ವಿದ್ಯಾರ್ಥಿಗಳು ತಾವು ಓದಿದ ಶಾಲೆಯು ಮುಚ್ಚದಂತೆ ನೋಡಿಕೊಳ್ಳಲು 6 ವರ್ಷ ತುಂಬಿದ ಎಲ್ಲ ಮಕ್ಕಳನ್ನು ಶಾಲೆಗೆ ಸೇರಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು.

ಈ ನಿಟ್ಟಿನಲ್ಲಿ ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುನಿಲ್, ಶಿಕ್ಷಕರಾದ ಕಾಂತರಾಜು, ಮಂಜೇಗೌಡ ಮತ್ತಿತರರು ಪೋಷಕರ ಮನವೊಲಿಸಿ ತಮ್ಮ ಗ್ರಾಮದ ಶಾಲೆಗೆ ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಸರ್ಕಾರಿ ಶಾಲೆಗಳು ಮುಚ್ಚುವುದರಿಂದ ಬಡವರಿಗೆ ಶಿಕ್ಷಣ ಎಂಬುದು ಗಗನ ಕುಸುಮವಾಗಲಿದೆ. ಖಾಸಗಿ ಶಾಲೆ ಫೀಸ್ ಕಟ್ಟಲಾಗದ ಬಡ, ಕೂಲಿ ಕಾರ್ಮಿಕ, ರೈತ ಮಕ್ಕಳು ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕು ಮಾಡಿ ಮನೆಗೆಲಸಕ್ಕೆ ಸೀಮಿತವಾಗಿ ಬಾಲ್ಯ ವಿವಾಹಕ್ಕೆ ಒಳಗಾಗುವ ಅಪಾಯ ಇರುತ್ತದೆ. ಖಾಸಗಿ ಶಾಲೆಯಲ್ಲಿ ಶಿಕ್ಷಣ ಕೊಡಿಸಲು ಸಾಧ್ಯವಾಗದ ಕಾರಣ ಬಡವರ ಶಾಲೆ ಬಿಟ್ಟ ಮಕ್ಕಳು ಹೋಟೆಲ್, ಗ್ಯಾರೇಜ್, ಹೊಲದಲ್ಲಿ ಬಾಲ ಕಾರ್ಮಿಕರಾಗಿ ದುಡಿಮೆ ಮಾಡಲು ಪೋಷಕರು ಕಳಿಸುತ್ತಾರೆ.

ಗ್ರಾಮದ ಸರ್ಕಾರಿ ಶಾಲೆ ಮುಚ್ಚಿದರೆ ಅದು ಮಕ್ಕಳ ಭವಿಷ್ಯ ರೂಪಿಸಬೇಕಾದ ದೇವಾಲಯವೇ ಮುಚ್ಚಿದಂತಾಗುತ್ತದೆ ಹಾಗಾಗಿ ಸರ್ಕಾರಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ಬೆದಡಹಳ್ಳಿ ಗ್ರಾಮಸ್ಥರು ಎಲ್ಲರೂ ದೊಡ್ಡ ಮನಸ್ಸು ಮಾಡಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡಿ ಶಾಲೆಯನ್ನು ಉಳಿಸಿಕೊಂಡಿರುವುದು ಇಡೀ ನಾಗರೀಕ ಸಮಾಜವೇ ಮೆಚ್ಚುವಂತಹ ಸಂಗತಿಯಾಗಿದೆ. ಅಲ್ಲದೆ ಶಾಲೆಯ ಶಿಕ್ಷಕರಾದ ಕೆ.ಆರ್.ವಸಂತಕುಮಾರ್ ತಮ್ಮ ಮಗುವನ್ನು ತಮ್ಮ ಶಾಲೆಗೆ ದಾಖಲು ಮಾಡುವ ಮೂಲಕ ಮಾದರಿಯಾಗಿದ್ದಾರೆ. ಇದರಿಂದ ಅನೇಕ ಪೋಷಕರು ಸ್ವಯಂಪ್ರೇರಿತವಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಕರೆತಂದು ಸರ್ಕಾರಿ ಶಾಲೆಗೆ ದಾಖಲು ಮಾಡಿರುವುದು ಶ್ರೇಷ್ಠ ಕೆಲಸವಾಗಿದೆ ಎಂದು ಬೆಡದಹಳ್ಳಿ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲೆಯ ಮುಖ್ಯ ಶಿಕ್ಷಕರು ಹಾಗೂ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಜಿ.ಎಸ್.ಮಂಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಗಿಮುದ್ದನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಕಾಂತರಾಜು, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಸುನಿಲ್, ಶಿಕ್ಷಣ ಸಂಯೋಜಕ ಕೃಷ್ಣನಾಯಕ್, ಬಿ.ಆರ್.ಪಿ. ಶ್ರೀಧರ್, ಮಾರ್ಗೋನಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕ ಕೆ.ಎಸ್.ಚಂದ್ರು, ಕೊರಟೀಕೆರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮಹೇಶ್, ಗ್ರಾ.ಪಂ.ಸದಸ್ಯ ಶ್ರೀನಿವಾಸ್, ಶಾಲೆಯ ಶಿಕ್ಷಕರಾದ ಕೆ.ಆರ್.ವಸಂತಕುಮಾರ್ ಕಾರ್ಯಕ್ರಮ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ಕೃಷ್ಣನಾಯಕ್, ಬಿ.ಆರ್.ಪಿ. ಶ್ರೀಧರ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುನಿಲ್, ಶಿಕ್ಷಕರಾದ ಕಾಂತರಾಜು, ಮಹೇಶ್, ಮೋಹನ್, ವೈರಮುಡಿ, ಸತೀಶ್, ಮಾರ್ಗೋನಹಳ್ಳಿ ಮೊರಾರ್ಜಿ ಶಾಲೆಯ ಶಿಕ್ಷಕ ಕೆ.ಎಸ್.ಚಂದ್ರು, ಗ್ರಾಮದ ಮುಖಂಡರಾದ ಪಾಪಣ್ಣ(ಬಲರಾಮೇಗೌಡ), ಅಕ್ಕವ್ವನ ನಿಂಗರಾಜು, ಸಣ್ಣನಿಂಗೇಗೌಡ, ಶಿವಲಿಂಗೇಗೌಡ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ನರಸಪ್ಪನ ನಾಗಣ್ಣ, ಮಾಸ್ಟರ್ಮನೆ ರೇವಣ್ಣ, ನಿಂಗೇಗೌಡ, ಭೈರೇಗೌಡ, ಸಾವಿತ್ರಮ್ಮ, ಅರುವಣ್ಣನ ಮಹೇಶ್, ಮಂಜೇಗೌಡ, ನಾಗರಾಜು, ಜಯರಾಂ, ಸುರೇಂದ್ರ, ದೊಡ್ಡೇಗೌಡ, ಮಂಜುನಾಥ್, ರುದ್ರೇಗೌಡ, ನಂಜುಂಡೇಗೌಡ, ಕೃಷ್ಣ, ಸವಿತಾ, ಭಾರತಿ, ರಂಜಿತಾಕಾಂತರಾಜು, ದೊಡ್ಡಟ್ಟಿ ಯೋಗೇಶ್, ಶಿಲ್ಪ, ಚಂದ್ರು, ಶ್ವೇತಾಹರೀಶ್, ಸೌಂದರ್ಯ, ಭಾರತೀ ಚಂದ್ರು, ರವಿಅನಿತಾ, ಜಯಮ್ಮ, ಆಶಾದೇವರಾಜು, ಪ್ರೇಮದೇವರಾಜು, ನಂಜಮ್ಮ ಪಾಪೇಗೌಡ, ಯೋಗೇಶ್, ಕಾಮಾಕ್ಷಮ್ಮ, ಸುಜಾತ, ಅಂಗನವಾಡಿ ಶಿಕ್ಷಕಿ ಜಯಂತಿ ಮತ್ತಿತರರು ಉಪಸ್ಥಿತರಿದ್ದರು.
– ಶ್ರೀನಿವಾಸ್ ಆರ್.
