ಬೆಂಗಳೂರು, ಜೂನ್ 3: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ರಚನೆಗೆ ಸಂಬಂಧಿಸಿದಂತೆ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪತ್ರದಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರಿಗೆ ಪ್ರಮಾಣವಚನ ಬೋಧನೆ ಮಾಡುವಂತೆ ಮನವಿ ಮಾಡಲಾಗಿದೆ. ಪತ್ರದ ಪ್ರಕಾರ, ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ, ಡಾ. ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಸಚಿವರಾಗಿ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಸತೀಶ್ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಯು.ಟಿ. ಖಾದರ್, ಈಶ್ವರ ಖಂಡ್ರೆ, ಯತೀಂದ್ರ ಸಿದ್ದರಾಮಯ್ಯ, ಬೈರತಿ ಸುರೇಶ್ ಹಾಗೂ ಶರಣ ಪ್ರಕಾಶ್ ಪಾಟೀಲ್ ಅವರ ಹೆಸರುಗಳು ಪಟ್ಟಿಯಲ್ಲಿ ಸೇರಿವೆ.
ಜೂನ್ 3, 2026 ದಿನಾಂಕದ ಈ ಪತ್ರದಲ್ಲಿ ರಾಜ್ಯಪಾಲರಿಗೆ ಪ್ರಮಾಣವಚನ ಕಾರ್ಯಕ್ರಮಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಲಾಗಿದೆ. ಪತ್ರದ ಕೊನೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ಸಹಿಯೂ ಕಾಣಿಸಿಕೊಂಡಿದೆ.
ಆದರೆ, ಈ ಪತ್ರದ ಅಧಿಕೃತತೆ ಕುರಿತು ಸರ್ಕಾರ ಅಥವಾ ರಾಜಭವನದಿಂದ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಹೀಗಾಗಿ ಪತ್ರದ ನೈಜತೆ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳುವವರೆಗೆ ಇದನ್ನು ಅಧಿಕೃತ ದಾಖಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ.
