ಚನ್ನರಾಯಪಟ್ಟಣ: ಭೈರವೈಕ್ಯ ಜಗದ್ಗುರು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಕನಸು ಹಾಗೂ ಆಶಯದಂತೆ ಭಕ್ತರ ಸಹಕಾರದೊಂದಿಗೆ ಹಿರಿಸಾವೆ ಹೋಬಳಿಯ ಪುರಾಣ ಪ್ರಸಿದ್ಧ ಕಬ್ಬಳಿ ಮಠದ ಶ್ರೀಕ್ಷೇತ್ರದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯವರ ದೇಗುಲವನ್ನು ಜೀರ್ಣೋದ್ಧಾರಗೊಳಿಸಲಾಗಿದ್ದು, ನವೆಂಬರ್ 14ರಂದು ದೇಗುಲದ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಆದಿಚುಂಚನಗಿರಿ ಹಾಸನ–ಕೊಡಗು ಶಾಖಾ ಮಠದ ಕಾರ್ಯದರ್ಶಿ ಪೂಜ್ಯ ಶ್ರೀ ಶಂಭುನಾಥ ಸ್ವಾಮೀಜಿ ತಿಳಿಸಿದರು.
ಕಬ್ಬಳಿ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 14ರಿಂದ 16ರವರೆಗೆ ದೇಗುಲದ ಲೋಕಾರ್ಪಣೆ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮಗಳು ನಡೆಯಲಿದ್ದು, ನವೆಂಬರ್ 21ರಿಂದ 25ರವರೆಗೆ ಬೃಹತ್ ಜಾತ್ರಾ ಮಹೋತ್ಸವವನ್ನು ಆಯೋಜಿಸಲಾಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ನವೆಂಬರ್ 14ರಂದು ಸಂಜೆ 5 ಗಂಟೆಗೆ ಗೋದೂಳಿ ಲಗ್ನದಲ್ಲಿ ಗುರು-ಗಣಪತಿ ಪ್ರಾರ್ಥನೆ, ಗಂಗಾಪೂಜೆ, ವಾಸ್ತುಶಾಂತಿ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ನವೆಂಬರ್ 15ರಂದು ವೇದಪಾರಾಯಣ, ಗಣಪತಿ ಪೂಜೆ, ಅಂಕುರಾರ್ಪಣೆ, ರಕ್ಷಾಬಂಧನ, ಕುಂಭಾಲಂಕಾರ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ನಡೆಯಲಿವೆ. ರಾತ್ರಿ 10.30ಕ್ಕೆ ವಿಗ್ರಹಗಳಿಗೆ ನವರತ್ನ ನ್ಯಾಸ, ಯಂತ್ರ ಸ್ಥಾಪನೆ, ರಜತ ಹಾಗೂ ಸುವರ್ಣ ಚಕ್ರ ಸ್ಥಾಪನೆ ಮತ್ತು ಅಷ್ಟಬಂಧನ ಸಮರ್ಪಣೆ ಕಾರ್ಯಗಳು ಜರುಗಲಿವೆ ಎಂದು ವಿವರಿಸಿದರು.

ನವೆಂಬರ್ 16ರಂದು ಬೆಳಗಿನ ಜಾವದಿಂದಲೇ ರುದ್ರಪಾರಾಯಣ, ವಿವಿಧ ಹೋಮ-ಹವನಗಳು ಹಾಗೂ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಬೆಳಗ್ಗೆ 9.30ರಿಂದ 10 ಗಂಟೆಯ ಶುಭ ಧನುರ್ ಲಗ್ನದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯವರಿಗೆ ಮಹಾ ಕುಂಭಾಭಿಷೇಕ, ಫಲ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಮಂತ್ರಪುಷ್ಪ, ಬಲಿಪೂಜೆ ಹಾಗೂ ಮಹಾಮಂಗಳಾರತಿ ನೆರವೇರಲಿದೆ. ಬಳಿಕ ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದರು.
ಇನ್ನು ನವೆಂಬರ್ 21ರಿಂದ 25ರವರೆಗೆ ನಡೆಯುವ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಹಾಗೂ ಶ್ರೀ ಚೌಡೇಶ್ವರಿ ದೇವಿಯ ಉತ್ಸವ, ಸರ್ಪೋತ್ಸವ, ಚುಂಚಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ ಹಾಗೂ ತೆಪ್ಪೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಯತಿವರೇಣ್ಯರು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹಾಗೂ ಶ್ರೀಮಠದ ಸದ್ಭಕ್ತರು ಭಾಗವಹಿಸಲಿದ್ದಾರೆ ಎಂದು ಶ್ರೀ ಶಂಭುನಾಥ ಸ್ವಾಮೀಜಿ ಮಾಹಿತಿ ನೀಡಿದರು.
– ಮಂಜುನಾಥ್ ಐ.ಕೆ.
