ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ (HD Deve Gowda) ಎನ್ಡಿಎ ಮೈತ್ರಿಕೂಟದಿಂದ ಈ ಬಾರಿ ರಾಜ್ಯಸಭಾ ಟಿಕೆಟ್ ನೀಡದಿರೋದು ಕರ್ನಾಟಕ ರಾಜಕಾರಣದಲ್ಲಿ ಭಾರಿ ಚರ್ಚೆಗಳಿಗೆ ಕಾರಣವಾಗಿದೆ. ಈ ನಡುವೆ ಬೆಂಗಳೂರಿನ ಜೆಡಿಎಸ್ ಕಚೇರಿ ‘ಜೆಪಿ ಭವನ’ದಲ್ಲಿ ಸುದ್ದಿಗೋಷ್ಠಿ ನಡೆಸಿ ಮೌನ ಮುರಿದಿರುವ ದೊಡ್ಡಗೌಡರು, ವಿರೋಧಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ತಮ್ಮ ನಡುವಿನ ಸಂಬಂಧ ಕೇವಲ ಒಂದು ಸೀಟಿಗೆ ಸೀಮಿತವಲ್ಲ ಎಂದು ಸ್ಪಷ್ಟಪಡಿಸಿರುವ ಹೆಚ್ಡಿಡಿ, ಇನ್ಮುಂದೆ ಯಾರ ಹಂಗಿಲ್ಲದೆ ದೇಶ ಮತ್ತು ರಾಜ್ಯದ ವಿಚಾರವಾಗಿ ಮಾತನಾಡುತ್ತೇನೆ ಎಂದು ಗುಡುಗಿದ್ದಾರೆ.
ತ್ರಿವಳಿ ಮುಖ್ಯಾಂಶಗಳು
-
ಮೋದಿ-ಗೌಡರ ಬಾಂಧವ್ಯ: “ನನ್ನ ಹಾಗೂ ಮೋದಿ ನಡುವಿನ ಸಂಬಂಧ ರಾಜ್ಯಸಭಾ ಸದಸ್ಯ ಸ್ಥಾನದಿಂದ ಮುಗೀತು ಎಂದು ಯಾರೂ ಭಾವಿಸಬೇಡಿ, ನಮ್ಮದು 10 ವರ್ಷಗಳ ವೈಯಕ್ತಿಕ ಸಂಬಂಧ” ಎಂದ ಹೆಚ್ಡಿಡಿ.
-
ಯಾರ ಹಂಗೂ ಇಲ್ಲ: ರಾಜ್ಯಸಭೆ ಸದಸ್ಯ ಸ್ಥಾನ ಇಲ್ಲದಿದ್ದರೂ ದೇಶ ಹಾಗೂ ರಾಜ್ಯದ ಪರವಾಗಿ ಧ್ವನಿ ಎತ್ತಲು ತಮಗೆ ಯಾರ ಹಂಗೂ ಇಲ್ಲ ಎಂದು ದೇವೇಗೌಡರು ತಿಳಿಸಿದ್ದಾರೆ.
-
ಪಕ್ಷ ಸಂಘಟನೆಗೆ ಒತ್ತು: ಎನ್ಡಿಎ ಮೈತ್ರಿಯಲ್ಲಿದ್ದರೂ ಜೆಡಿಎಸ್ ಸ್ವತಂತ್ರವಾಗಿ ಪಕ್ಷ ಸಂಘಟನೆ ಮಾಡಲಿದೆ. ಬಿಬಿಎಂಪಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ನಡೆಸಲಾಗುತ್ತಿದೆ.
“ನನ್ನ-ಮೋದಿ ಸಂಬಂಧ ರಾಜ್ಯಸಭಾ ಸ್ಥಾನಕ್ಕೆ ಸೀಮಿತವಲ್ಲ”
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ಡಿ. ದೇವೇಗೌಡರು, “ನಾನು ರಾಜಕೀಯಕ್ಕೆ ಬಂದು 7 ದಶಕಗಳು ಕಳೆದಿವೆ. ಜನಪರ ಸೇವೆ ಸಲ್ಲಿಸಿದ್ದೇನೆ. ನನಗೆ ಮತ್ತೆ ರಾಜ್ಯಸಭಾ ಸದಸ್ಯ ಆಗಬೇಕು ಎಂಬ ವ್ಯಾಮೋಹ ಇದ್ದಿದ್ದರೆ ಕೇಂದ್ರದ ಮುಖಂಡರನ್ನು ಭೇಟಿ ಮಾಡುತ್ತಿದ್ದೆ. ಆದರೆ, ನಾವಾಗಿಯೇ ಸೀಟ್ ಕೇಳಿಲ್ಲ. ನಮ್ಮಲ್ಲಿ ಕೇವಲ 18 ಶಾಸಕರಿದ್ದು, ಬಿಜೆಪಿಗೆ ಒಂದು ಸೀಟ್ ಸಿಗುವುದರಿಂದ ನಾವೇಕೆ ಅಪೇಕ್ಷೆ ಮಾಡಬೇಕು ಎಂದು ಕುಮಾರಸ್ವಾಮಿ ಅವರೂ ಹೇಳಿದ್ದರು” ಎಂದು ಸ್ಪಷ್ಟನೆ ನೀಡಿದರು.
ಮೋದಿ ಜೊತೆಗಿನ ಒಡನಾಟದ ಬಗ್ಗೆ ದೊಡ್ಡಗೌಡರ ಮಾತು: “ಕಳೆದ 10 ವರ್ಷಗಳಿಂದ ಪ್ರಧಾನಿ ಮೋದಿ ಮತ್ತು ನನ್ನ ನಡುವೆ ಉತ್ತಮ ವೈಯಕ್ತಿಕ ಸಂಬಂಧವಿದೆ. ಮೋದಿಯವರ ಆಡಳಿತ ಮತ್ತು ನಾಯಕತ್ವದ ಬಗ್ಗೆ ನನ್ನ ಭಾವನೆಯನ್ನು ಸದಾ ನಿರ್ಭಯವಾಗಿ ಹೇಳಿದ್ದೇನೆ. ರಾಜ್ಯಸಭಾ ಸದಸ್ಯ ಸ್ಥಾನ ಇಲ್ಲದಿದ್ದರೂ ಮೋದಿಯವರ ಜೊತೆ ನನ್ನ ಪತ್ರ ವ್ಯವಹಾರ ಹಾಗೂ ಸಂಬಂಧ ಹೀಗೆಯೇ ಮುಂದುವರೆಯುತ್ತದೆ.”
ಜೆಡಿಎಸ್ ಪಕ್ಷದ ಬೆಳವಣಿಗೆಗೆ ಶಕ್ತಿ ಮೀರಿ ಕೆಲಸ ಮಾಡ್ತೇನೆ!
ಟಿಕೆಟ್ ಕೈತಪ್ಪಿದ ಮಾತ್ರಕ್ಕೆ ತಾವು ಸುಮ್ಮನೆ ಕೂರುವುದಿಲ್ಲ ಎಂದಿರುವ ದೇವೇಗೌಡರು, ಜೆಡಿಎಸ್ ಪಕ್ಷದ ಬೆಳವಣಿಗೆಗೂ ಶಕ್ತಿ ಮೀರಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. “ನಾವು ಎನ್ಡಿಎಯಲ್ಲೇ ಇದ್ದೇವೆ, ಆದರೂ ನಮ್ಮ ಪಕ್ಷ ಸಂಘಟನೆ ಮಾಡುವುದು ನಮ್ಮ ಕರ್ತವ್ಯ. ಬಿಬಿಎಂಪಿ (GBAM) ಚುನಾವಣೆಗೆ ಈಗಾಗಲೇ ಕಮಿಟಿ ಮಾಡಲಾಗಿದೆ. ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸೇರಿದಂತೆ ಮುಂಬರುವ ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗೆ ಜೆಡಿಎಸ್ ಸಜ್ಜಾಗುತ್ತಿದೆ” ಎಂದರು.
ರಾಜ್ಯಸಭೆ ಆಯ್ಕೆ ಬಗ್ಗೆ ರಾಜಕೀಯ ವಲಯದಲ್ಲಿ ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡುತ್ತಿದ್ದಾರೆ. ನಮ್ಮ ಕೆಲವು ಸ್ನೇಹಿತರು ನನಗೆ ಟಿಕೆಟ್ ಕೊಡಬೇಕು ಎಂದಿದ್ದರು, ಆದರೆ ನಾನೇ ಅವರಿಗೆ ಸಮಾಧಾನ ಮಾಡಿ ಕಳುಹಿಸಿದ್ದೇನೆ ಎಂದು ಹೇಳುವ ಮೂಲಕ ದೇವೇಗೌಡರು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.
