ಮುಂಬೈ: ಬಾಲಿವುಡ್ನ ಖ್ಯಾತ ರ್ಯಾಪ್ ಸಿಂಗರ್ ಬಾದ್ಶಾ (Badshah) ಮತ್ತು ಪಂಜಾಬಿ ನಟಿ ಕಂ ಮಾಡೆಲ್ ಇಶಾ ರಿಖಿ (Isha Rikhi) ಅವರ ಮದುವೆಯ ಕುರಿತು ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ಎಲ್ಲಾ ಊಹಾಪೋಹ ಹಾಗೂ ವದಂತಿಗಳಿಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ತಾವು ಬಾದ್ಶಾ ಅವರ ಕೈ ಹಿಡಿದಿರುವುದನ್ನು ನಟಿ ಇಶಾ ರಿಖಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.
ಬಾದ್ಶಾ ಈ ಬಗ್ಗೆ ಎಲ್ಲೂ ತುಟಿ ಬಿಚ್ಚದಿದ್ದರೂ, ಇಶಾ ರಿಖಿ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳೊಂದಿಗೆ ನಡೆಸಿದ ‘ಆಸ್ಕ್ ಮಿ ಎನಿಥಿಂಗ್’ (Ask Me Anything) ಸಂವಾದದಲ್ಲಿ ತಾವಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದನ್ನು ಖಚಿತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಫಾಲೋ ಮಾಡದಿರಲು ಕಾರಣವೇನು?
ಸಂವಾದದ ವೇಳೆ ಅಭಿಮಾನಿಯೊಬ್ಬರು, ‘ನೀವಿಬ್ಬರು ಮದುವೆಯಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಏಕೆ ಫಾಲೋ ಮಾಡುತ್ತಿಲ್ಲ?’ ಎಂದು ನೇರವಾಗಿ ಕೇಳಿದ್ದರು. ಇದಕ್ಕೆ ಅತ್ಯಂತ ಹಾಸ್ಯಭರಿತವಾಗಿ ಉತ್ತರಿಸಿದ ಇಶಾ, “ಹೌದು, ನನಗೆ ಮದುವೆಯಾಗಿದೆ. ಆದರೆ ನೀವೆಲ್ಲರೂ ಕೇಳುತ್ತಿರುವ ಈ ಪ್ರಶ್ನೆಗೆ ನನ್ನ ಪತಿಯೇ ಸರಿಯಾದ ವಿವರಣೆ ನೀಡಬೇಕು. ಪತಿದೇವ್ (ಬಾದ್ಶಾ), ಜನರಿಗೆ ಸಾಕಷ್ಟು ಪ್ರಶ್ನೆಗಳಿವೆ, ದಯವಿಟ್ಟು ಆದಷ್ಟು ಬೇಗ ಉತ್ತರಿಸಿ” ಎಂದು ಬರೆದು ಬಾದ್ಶಾ ಅವರನ್ನೇ ಟ್ಯಾಗ್ ಮಾಡಿದ್ದಾರೆ.
ಮೊದಲ ಬಾರಿಗೆ ರೋಮ್ಯಾಂಟಿಕ್ ಫೋಟೋ ವೈರಲ್:
‘ನಿಮ್ಮ ಪತಿ ಬಾದ್ಶಾ ಜೊತೆ ಒಂದೇ ಒಂದು ಫೋಟೋ ಕೂಡ ಏಕೆ ಪೋಸ್ಟ್ ಮಾಡಿಲ್ಲ?’ ಎಂದು ಮತ್ತೊಬ್ಬ ಅಭಿಮಾನಿ ಬೇಸರ ವ್ಯಕ್ತಪಡಿಸಿದ್ದಕ್ಕೆ, ಇಶಾ ತಮ್ಮಿಬ್ಬರ ಅಪರೂಪದ ಹಾಗೂ ಪ್ರೇಮಭರಿತ ಫೋಟೋ ಒಂದನ್ನು ಮೊದಲ ಬಾರಿಗೆ ಹಂಚಿಕೊಂಡಿದ್ದಾರೆ. ಆ ಚಿತ್ರದಲ್ಲಿ ಇಶಾ ಅವರು ಬಾದ್ಶಾ ಅವರನ್ನು ಗಟ್ಟಿಯಾಗಿ ಆಲಂಗಿಸಿಕೊಂಡಿರುವುದನ್ನು ಕಾಣಬಹುದು.
ಮದುವೆಯ ಹಿನ್ನೆಲೆ: ಇವರಿಬ್ಬರ ಮದುವೆಯ ಸುದ್ದಿ ಮೊದಲ ಬಾರಿಗೆ ಈ ವರ್ಷದ ಮಾರ್ಚ್ 24ರಂದು ಮುನ್ನೆಲೆಗೆ ಬಂದಿತ್ತು. ಇಶಾ ಅವರ ತಾಯಿ ಪೂನಂ ರಿಖಿ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಅತ್ಯಂತ ಆಪ್ತರ ಸಮ್ಮುಖದಲ್ಲಿ ನಡೆದ ಖಾಸಗಿ ಮದುವೆಯ ಫೋಟೋಗಳು ವೈರಲ್ ಆಗಿದ್ದವು.
ನಿಮ್ಮ ಮಾಹಿತಿಗಾಗಿ, ಇಶಾ ರಿಖಿ ಅವರೊಂದಿಗೆ ಮದುವೆಯಾಗುವ ಮುನ್ನ ಬಾದ್ಶಾ ಅವರು ಜಾಸ್ಮಿನ್ ಮಸಿಹ್ ಅವರನ್ನು ವಿವಾಹವಾಗಿದ್ದರು. ಆದರೆ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ 2020ರಲ್ಲಿ ಇವರಿಬ್ಬರು ಪರಸ್ಪರ ಒಪ್ಪಿಗೆಯಿಂದ ದೂರಾಗಿದ್ದರು. ಈ ಮಾಜಿ ದಂಪತಿಗೆ ಜೆಸ್ಸೆಮಿ ಗ್ರೇಸ್ ಮಸಿಹ್ ಸಿಂಗ್ ಎಂಬ ಮಗಳಿದ್ದಾಳೆ.
