ಹಾಸನ: ಜಿಲ್ಲೆಯ ಅಂಕಪುರ ಗ್ರಾಮದ ಹಿರಿಯ ರಂಗನಟ, ನಿವೃತ್ತ ಪ್ರಾಂಶುಪಾಲ ಹಾಗೂ ಕನ್ನಡ ಪರ ಹೋರಾಟಗಾರ ಪ್ರೊ. ಎ.ಹೆಚ್. ಗಣೇಶ್ ಅಂಕಪುರ ಅವರಿಗೆ ಪ್ರತಿಷ್ಠಿತ “ಕರ್ನಾಟಕ ಕಲಾ ರತ್ನ ಪ್ರಶಸ್ತಿ” ಲಭಿಸಿದೆ.
ಬೆಂಗಳೂರು ಮೂಲದ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನವು ರಂಗಭೂಮಿ, ಕನ್ನಡ ನಾಡು-ನುಡಿ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ಅವರು ಸಲ್ಲಿಸಿರುವ ಜೀವಿತಾವಧಿಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಪ್ರೊ. ಗಣೇಶ್ ಅವರು ಕದಂಬ ಸೈನ್ಯ ಕನ್ನಡ ಸಂಘಟನೆಯ ಹಾಸನ ಜಿಲ್ಲಾಧ್ಯಕ್ಷರಾಗಿ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಂಗಗೀತೆ ಗಾಯನ ಹಾಗೂ ರಂಗಸಂಗೀತ ವಿಭಾಗದ ಹಾಸನ ಜಿಲ್ಲಾ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಿಂದ ನಿವೃತ್ತಿಯಾದ ನಂತರವೂ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಲ್ಲದೆ, ಅಂಕಪುರ ಗ್ರಾಮದ ಗ್ರಾಮದೇವತೆ ದೇವಸ್ಥಾನಗಳ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಜಾತ್ರೆ, ಉತ್ಸವ, ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪ್ರೊ. ಎ.ಹೆಚ್. ಗಣೇಶ್ ಅವರ ಈ ಸಾಧನೆಗೆ ಕದಂಬ ಸೈನ್ಯದ ಹೊಳೆನರಸೀಪುರ ತಾಲ್ಲೂಕು ಅಧ್ಯಕ್ಷ, ಕಲಾವಿದ, ಪ್ರಗತಿಪರ ರೈತ ಹಾಗೂ ಸಮಾಜಸೇವಕ ಪುಟ್ಟಸ್ವಾಮಿ ಗೌಡ ರಾಮೇನಹಳ್ಳಿ ಹಾಗೂ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ ಅಭಿನಂದನೆ ಸಲ್ಲಿಸಿ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರಿಂದ ಇನ್ನಷ್ಟು ಸೇವೆ ದೊರಕಲಿ ಎಂದು ಶುಭ ಹಾರೈಸಿದ್ದಾರೆ.

