ತುಮಕೂರು: ಜಿಲ್ಲೆಯ ಜನರ ಪಾಲಿಗೆ ಮರಣಶಾಸನವಾಗಿರುವ ಅವೈಜ್ಞಾನಿಕ,ವಿವಾದಿತ ಹೇಮಾವತಿ ಎಕ್ಸ್ ಪ್ರೆಸ್ ಪೈಪ್ಲೈನ್ ಲಿಂಕ್ ಕೆನಾಲ್ ಯೋಜನೆಯನ್ನು ರದ್ದುಗೊಳಿಸಬೇಕು, ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಮಾಜಿ ಸಚಿವ ಸೊಗಡು ಶಿವಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಸ್ಥಗಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗೆ ಇಂದೇ ಮನವಿ ಪತ್ರ ನೀಡುತ್ತೇನೆ, ಜಿಲ್ಲೆಯ ಪಾಲಿನ ಹೇಮಾವತಿ ನೀರನ್ನು ಪೈಪ್ ಲೈನ್ ಮೂಲಕ ಮಾಗಡಿ, ರಾಮನಗರಕ್ಕೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಹೇಳಿದರು.
ಹೇಮಾವತಿ ಜಲಾಶಯ ಯೋಜನೆಯು ಪರಿಪೂರ್ಣ ನೀರಾವರಿ ಯೋಜನೆಯಾಗಿದ್ದು, ಇದರಡಿ ಬರುವ ತುಮಕೂರು ಶಾಖಾ ನಾಲೆಯ ಉದ್ದ 228 ಕಿ.ಮೀ ಇದ್ದು, 2 ಲಕ್ಷ 37 ಸಾವಿರ ಎಕರೆ ವಿಸ್ತೀರ್ಣದ ಅಚ್ಚುಕಟ್ಟು ಪ್ರದೇಶ ಹೊಂದಿರುತ್ತದೆ. ಆದರೆ ಇದುವರೆಗೂ ಈ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿರುವುದಿಲ್ಲ. ಜಿಲ್ಲೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾದ್ದರಿಂದ ಜಿಲ್ಲೆಗೆ ನಿಗಧಿಯಾಗಿದ್ದ 18.38 ಟಿ.ಎಂ.ಸಿ. ನೀರಿನಲ್ಲಿ 12.38 ಟಿ.ಎಂ.ಸಿ. ನೀರನ್ನು ಅಚ್ಚುಕಟ್ಟು ಪ್ರದೇಶಕ್ಕೂ ಹಾಗೂ 6 ಟಿ.ಎಂ.ಸಿ. ನೀರನ್ನು ಕುಡಿಯುವ ನೀರಿನ ಯೋಜನೆಗಳಿಗೂ ಹಂಚಿಕೆಯನ್ನು ಈಗಾಗಲೇ ಮಾಡಲಾಗಿದೆ. ಎಕ್ಸ್ಪ್ರೆಸ್ ಪೈಪ್ಲೈನ್ ಲಿಂಕ್ ಕೆನಾಲ್ ಯೋಜನೆ ಕಾರ್ಯಗತಗೊಂಡರೆ ತುಮಕೂರು ಜಿಲ್ಲೆಯ ತಾಲ್ಲೂಕುವಾರು ಹಳ್ಳಿಗಳಿಗೆ ಸಮರ್ಪಕವಾಗಿ ಮತ್ತು ಸಮಾನಾಂತರವಾಗಿ ರಾಷ್ಟ್ರೀಯ ಜಲ ಕಾರ್ಯನೀತಿಯ ಅನ್ವಯ ನೀರು ಹರಿಸಲು ಸಾಧ್ಯವಾಗುವುದಿಲ್ಲ ಎಂದರು.
ಎಕ್ಸ್ಪ್ರೆಸ್ ಪೈಪ್ಲೈನ್ ಲಿಂಕ್ ಕೆನಾಲ್ ಯೋಜನೆಯನ್ನು ಕಾರ್ಯಗತಗೊಳಿಸಿದರೆ ಟಿಬಿಸಿ ನಾಲೆಯ ಸರಪಳಿ 70 ಕಿ.ಮೀ.ನಿಂದ 166 ಕಿ.ಮೀ.ವರೆಗೆ ನಾಲೆಯಲ್ಲಿ ಹರಿಯುವ ನೀರಿನ ಎತ್ತರ ಮತ್ತು ವೇಗ ಕಡಿಮೆಯಾಗಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುವ 23 ಉಪನಾಲೆಗಳು ಹಾಗೂ 23 ಕುಡಿಯುವ ನೀರಿನ ಯೋಜನೆಗಳ ನೀರು ನಿರ್ವಹಣಾ ವ್ಯವಸ್ಥೆ ವಿಸ್ಕೃತಗೊಳ್ಳುವುದು. ಅನವಶ್ಯಕ ಮತ್ತು ಅವೈಜ್ಞಾನಿಕ ಯೋಜನೆಗೆ ವಿನಿಯೋಗಿಸಲು ಹೊರಟಿರುವ ರೂ. 986 ಕೋಟಿಗಳ ಮೊತ್ತದ ಈ ಯೋಜನೆ ಬದಲಾಗಿ ಹೇಮಾವತಿ ಯೋಜನೆಯ ಕುಣಿಗಲ್ ತಾಲ್ಲೂಕಿನ ಟಿಬಿಸಿ ನಾಲೆಯ ಸರಪಳಿ 195 ಕಿ.ಮೀ ನಿಂದ 228 ಕಿ.ಮೀ.ವರೆಗೆ ಮುಖ್ಯ ನಾಲೆ ಉಪ ನಾಲೆಗಳು ವಿತರಣಾ ನಾಲೆಗಳು ಹಾಗೂ ಡಿಪಿಓಗಳ ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಕುಣಿಗಲ್ ತಾಲ್ಲೂಕಿನ ಸುಮಾರು 8000 ಹೆಕ್ಟೇರ್ ಅಚ್ಚುಕಟ್ಟಿಗೆ ನೀರು ಹರಿಸಬಹುದಾಗಿದೆ ಎಂದು ಸೊಗಡು ಶಿವಣ್ಣ ಹೇಳಿದರು.
ತಾಂತ್ರಿಕ ಪರಿಣಿತರ ತಂಡದಿಂದ ಸ್ಥಳ ಪರಿಶೀಲನೆ ನಡೆಸಿ ಆಧುನೀಕರಣಗೊಂಡಿರುವ ಟಿಬಿಸಿ ನಾಲೆಯ ಮುಖೇನವೇ ಕುಣಿಗಲ್ ತಾಲ್ಲೂಕಿಗೆ ನಿಗಧಿಯಾಗಿರುವ 3 ಟಿಎಂಸಿ ನೀರನ್ನು ಹರಿಸುವ ಸಾಧ್ಯತೆ ಮತ್ತು ಅಸಾಧ್ಯತೆಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ನಡೆಸಿ ವಿವರವಾದ ಮಾಹಿತಿ ಪಡೆಯುವವರೆಗೂ ಪೈಪ್ಲೈನ್ ಲಿಂಕ್ ಕೆನಾಲ್ ಯೋಜನೆಯನ್ನು ಯಾವುದೇ ಕಾರಣಕ್ಕೂ ಮುಂದುವರೆಸಬಾರದು ಎಂದು ಒತ್ತಾಯಿಸಿದರು.
ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ, ಟಿ.ಸಿ.ಶಶಿಧರ್, ಧನಿಯಾಕುಮಾರ್, ಅರುಣ್ ಕೃಷ್ಣಯ್ಯ, ವೀರಶೈವ ಬ್ಯಾಂಕ್ ಅಧ್ಯಕ್ಷ ಕೆ.ಜೆ.ರುದ್ರಪ್ಪ, ಉಪಾಧ್ಯಕ್ಷ, ವಕೀಲ ಹೆಬ್ಬಾಕ ಮಲ್ಲಿಕಾರ್ಜನಯ್ಯ, ಶಬ್ಬಿರ್ ಅಹಮ್ಮದ್, ಪ್ರಭಾಕರ್ ಮ್ಯಾಸ ನಾಯಕ ಹಾಜರಿದ್ದರು.
– ಚಂದ್ರಚೂಡ ಕೆ.ಬಿ.
