ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದಕ್ಕೆ ಬಹುದೊಡ್ಡ ಇತಿಹಾಸವೇ ಇದೆ. ಮೇಕೆದಾಟು ಯೋಜನೆಗೆ ನೆರೆ ರಾಜ್ಯದಿಂದ ಕ್ಯಾತೆ ನಡೆದುಕೊಂಡೇ ಬಂದಿದ್ದು, ಈ ನಡುವೆ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಕಾವೇರಿ ನದಿ ಒಡಲು ಸಂಪೂರ್ಣ ಬರಿದಾಗಿರೋದು ಕರ್ನಾಟಕಕ್ಕೆ ತೀವ್ರ ಜಲಸಂಕಷ್ಟದ ಭೀತಿ ಮೂಡಿಸಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತಮಿಳುನಾಡಿಗೆ ನೀರು ನೀಡೋದು ಹಾಗಿರಲಿ; ಮೈಸೂರು, ಬೆಂಗಳೂರಿನಲ್ಲಿಯೇ ಕುಡಿಯುವ ನೀರಿಗೂ ಪರದಾಟ ನಡೆಸಬೇಕಾದ ಸ್ಥಿತಿ ಬರಬಹುದೆಂಬ ಆತಂಕ ಶುರುವಾಗಿದೆ.
ಕಾವೇರಿ ನದಿ ಪಾತ್ರ ಸಂಪೂರ್ಣ ಖಾಲಿ ಖಾಲಿ
ಜೂನ್ ತಿಂಗಳಲ್ಲಿ ಧಾರಾಕಾರ ಮಳೆ ನಿರೀಕ್ಷಿಸಲಾಗಿದ್ದ ಕೊಡಗು ಜಿಲ್ಲೆಯ ಕಾವೇರಿ ನದಿ ಪಾತ್ರದಲ್ಲಿ, ನದಿ ಹರಿವು ಗಣನೀಯವಾಗಿ ಕುಸಿದಿದೆ. ಕೊಡಗು-ಮೈಸೂರು ಗಡಿಯಲ್ಲಿರುವ ಕೊಪ್ಪ ಸೇತುವೆ ಬಳಿ ಕಾವೇರಿ ನದಿಯ ಸ್ಥಿತಿಗತಿಯನ್ನು ಪರಿಶೀಲಿಸಿದಾಗ, ಸಾಮಾನ್ಯವಾಗಿ 10-15 ಅಡಿ ಹರಿಯಬೇಕಿದ್ದ ನದಿ ಈಗ ಕೇವಲ ಅರ್ಧದಿಂದ ಒಂದು ಅಡಿ ನೀರಿಗೆ ಸೀಮಿತವಾಗಿದೆ. ನದಿಯ ಒಡಲು ಕಲ್ಲುಗಳಿಂದ ಕೂಡಿದ್ದು, ಜಲಮಾಪಕದಲ್ಲಿ ನೀರು ಶೂನ್ಯ ಮಟ್ಟವನ್ನು ತಲುಪಿದೆ. ಕಾವೇರಿ ನದಿಯ ಪ್ರಮುಖ ಜಲಾಶಯಗಳಾದ ಕೆಆರ್ಎಸ್ ಮತ್ತು ಹಾರಂಗಿ ಸಹ ತುಂಬದೆ ಇರುವುದರಿಂದ ಮುಂಬರುವ ದಿನಗಳಲ್ಲಿ ಸಂಕಷ್ಟ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಜಲಾಶಯಗಳ ಸದ್ಯದ ಆತಂಕಕಾರಿ ಸ್ಥಿತಿಗತಿ
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಡ್ಯಾಂಗಳು ಬರಿದಾಗುತ್ತಿದ್ದು, ನೀರಿನ ಸಂಗ್ರಹ ಮಟ್ಟ ಕುಸಿಯುತ್ತಿದೆ.
| ಜಲಾಶಯ | ಗರಿಷ್ಠ ಸಾಮರ್ಥ್ಯ | ಈಗಿರುವ ನೀರು | ಸದ್ಯದ ಪರಿಸ್ಥಿತಿ |
| ಕೆಆರ್ಎಸ್ | 49 ಟಿಎಂಸಿ | 11 ಟಿಎಂಸಿ | ಗರಿಷ್ಠ ಸಾಮರ್ಥ್ಯವಿರುವ ಡ್ಯಾಂನಲ್ಲಿ ಈಗ ಲಭ್ಯವಿರೋದು ಕೇವಲ 11 ಟಿಎಂಸಿ ಮಾತ್ರ. |
| ಹಾರಂಗಿ | 5.7 ಟಿಎಂಸಿ | 2.3 ಟಿಎಂಸಿ | ಲಭ್ಯವಿರುವ 2.3 ಟಿಎಂಸಿ ಪೈಕಿ ಬಳಕೆಗೆ ಸಿಗೋದು 1.3 ಟಿಎಂಸಿ ಮಾತ್ರ. ಜಲಾಶಯದ ಒಳಹರಿವು ಕೇವಲ 255 ಕ್ಯೂಸೆಕ್ ಇದ್ದರೆ ಹೊರ ಹರಿವು 180 ಕ್ಯೂಸೆಕ್ನಷ್ಟಿದೆ. ಕಳೆದ ವರ್ಷ ಇದರ ಒಳಹರಿವು 2853 ಕ್ಯೂಸೆಕ್ ಹಾಗೂ ಹೊರಹರಿವು 3416 ಕ್ಯೂಸೆಕ್ಗಳಷ್ಟಿತ್ತು. |
| ಕಬಿನಿ | 19.52 ಟಿಎಂಸಿ | 5.05 ಟಿಎಂಸಿ | ಕಬಿನಿ ಜಲಾಶಯದ ನೀರಿನ ಮಟ್ಟ 53.38 ಅಡಿ ಇದೆ (ಗರಿಷ್ಠ ಮಟ್ಟ 84 ಅಡಿ). ಜಲಾಶಯಕ್ಕೆ ಪ್ರಸ್ತುತ 796 ಕ್ಯೂಸೆಕ್ ನೀರು ಮಾತ್ರ ಒಳಹರಿದು ಬರುತ್ತಿದ್ದು, ನದಿಗೆ ಹಾಗೂ ಕಾಲುವೆಗಳಿಗೆ ಯಾವುದೇ ನೀರು ಬಿಡುತ್ತಿಲ್ಲ (ಹೊರಹರಿವು ಶೂನ್ಯ ಕ್ಯೂಸೆಕ್). |
ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ
ಒಂದೆಡೆ ಕರ್ನಾಟಕ ತೀವ್ರ ಜಲಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಕರ್ನಾಟಕ ಸರ್ಕಾರವು ಉದ್ದೇಶಿಸಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ. ತಮಿಳುನಾಡು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಂಡಿಸಿದ ಮೇಕೆದಾಟು ವಿರೋಧಿ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಯೋಜನೆಗೆ ಯಾವುದೇ ರೀತಿಯ ತಾಂತ್ರಿಕ ಅಥವಾ ಪರಿಸರ ಇಲಾಖೆಯ ಅನುಮತಿಯನ್ನು ನೀಡಬಾರದು ಎಂದು ತಮಿಳುನಾಡು ಸರ್ಕಾರವು ಈ ನಿರ್ಣಯದ ಮೂಲಕ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ವರದಿ: ಪ್ರಸನ್ನ ಹೆಗಡೆ
