ಬೆಳಿಗ್ಗೆ ಶಿಗವಾಳ್ ಗ್ರಾಮಕ್ಕೆ ಹೊಳೆನರಸೀಪುರ ಕುಪ್ಪೆ ಮಾರ್ಗ ಕೇರಳಾಪುರಕ್ಕೆ ಪ್ರಯಾಣಿಸುತ್ತಿದ್ದೆ, ಪೋನ್ ರಿಂಗಣಿಸಿತು. ಅತ್ತಲ್ಲಿಂದ ಚಿತ್ರ ಕಲಾವಿದ ಅತ್ನಿ ಸುರೇಶ್. “ಸಾರ್, ನಿಮಗೆ ಆರ್ಟಿಸ್ಟ್ ಒಬ್ಬರ ಪರಿಚಯ ಮಾಡಿಕೊಡುವೆ ಎಲ್ಲಿದ್ದೀರಾ..? “ ನಮ್ಮ ಅಜ್ಜಿ ಊರಿಗೆ ಗೃಹ ಪ್ರವೇಶಕ್ಕೆ ಹೋಗುತ್ತಿದ್ದೇನೆ. ನಾಲ್ಕು ಗಂಟೆಗೆ ವಾಪಸ್ಸು ಬರುತ್ತೇನೆ ಎಂದೆ. ಬಂದು ಹಾಸನ ಗಾಂಧಿ ಬಜಾರ್ ಸರ್ಕಲ್ ಬಳಿಯ ಕಲಾವಿದೆಯ ಮನೆಗೆ ಹೋದೆವು.

ಅವರ ಹೆಸರು ಶಿಲ್ಪ ಗುಲ್ ಗುಲಿಯಾ. ಗುಜರಾತಿನ ಭಿಲ್ ವಾಡದವರು. ಇವರ ತಂದೆ ಪಾರಸ್ ಮಲ್ ರಾಂಕ. ಓದಿರುವುದು ಬಿಎಸ್ಸಿ ಹೋಂ ಸೈನ್ಸ್. ಪ್ಯಾಷನ್ ಡಿಸೈನ್, ಸೋಶಿಯಾಲಾಜಿ ಎಂ.ಎ. ಇವರ ಪತಿ ಗೌರವ್ ಗುಲ್ ಗುಲಿಯಾ ನಮ್ಮನ್ನು ಅವರ ಮನೆಗೆ ಕರೆದೊಯ್ದಿದ್ದರು. ಇವರ ತಂದೆ ಶಾಂತಿಲಾಲ್ ತಾಯಿ ಪ್ರೇಮಲತಾ. ಇವರ ಕುಟುಂಬ ೧೯೯೨ರಿಂದ ಹಾಸನದಲ್ಲಿ ಚಿನ್ನ ಬೆಳ್ಳಿ ವ್ಯಾಪಾರ ವಹಿವಾಟು ಮಾಡಿಕೊಂಡು ನೆಲೆಸಿದೆ. ತಮ್ಮ ಪತ್ನಿಯ ಕರಕುಶಲತೆ ಬಗ್ಗೆ ಗೌರವ್ಗೆ ಅಪಾರ ಗೌರವವಿದೆ. ಕುಟುಂಬದವರ ಪ್ರೋತ್ಸಾಹವೂ ಇದೆ. ಕಾಫಿ ಕೊಟ್ಟರು. ಕುಡಿಯುತ್ತಾ ಮೇಡಂ ಜೋಡಿಸಿಡುತ್ತಿದ್ದ ಹ್ಯಾಂಡ್ ಮೇಡ್ ಮೆಟಿರಿಯಲ್ ನೋಡುತ್ತಾ ಇದನ್ನೆಲ್ಲಾ ಹೇಗೆ ರೂಪಿಸಿದಿರಿ ಕೇಳಿದೆ.

ಮೇಡಂ ಕನ್ನಡ ಕಲಿತ್ತಿಲ್ಲ. ನಾನೆಂದು ಹಿಂದಿಯಲ್ಲಿ ಮಾತಾಡಿಲ್ಲ. ಈಗ ಇಂಗ್ಲೀಷ್ ನೆರವಾಯಿತು. ಅಲಂಕಾರಿಕ ವೃತ್ತಾಕಾರದ ನಾಲ್ಕೈದು ಕನ್ನಡಿಗಳ ಸುತ್ತಾ ಬಟ್ಟೆ ಬರೆಯ ಡಿಸೈನ್ಗಳು. ಮಧ್ಯೆ ಮುಖ ನೋಡಿಕೊಂಡೆ. ಪ್ಯಾಬ್ರಿಕ್ ಕಲರ್ನಲ್ಲಿ ರೂಪಿಸಿದ್ದ ಅದೇ ಕಣ್ಣು ಇದೇ ನನ್ನ ಕಣ್ಣಿಗೆ ಕಲಾತ್ಮಕವಾಗಿ ಕಂಡಿತು. ಗೋಡೆಗೆ ತೂಗು ಹಾಕಿದ್ದ ಗುಜರಾತಿ ಶೈಲಿಯ ನೀರೆಯ ಚಿತ್ರಪಟ ಆಕರ್ಷಿಸಿತು. ಸೀರೆ ಅಂಗಡಿಯಲ್ಲಿ ಈ ತರಹದ ಡಿಸೈನ್ ಸೀರೆ ನೋಡಿದ್ದೆ. ಇದು ಗುಜರಾತಿ ಶೈಲಿಯ ಸಾಂಪ್ರದಾಯಿಕ ಆರ್ಟ್ ವರ್ಕ್ ಎಂದರು. ಅವರ ರೆಸಿನ್ ಆರ್ಟ್, ಟ್ರೆಡಿಶನಲ್ ಪೈಂಟಿಂಗ್, ಫ್ಯಾಡ್ ಪೈಂಟಿಂಗ್ ಮತ್ತು ಜನಪದ ಕಲೆಗಳು ರಾಜಸ್ಥಾನಿ ಶ್ರೀಮಂತ ಕಲೆಗಳಾಗಿದ್ದವು. ಇವರ ಆರ್ಟಿಸ್ಟಿಕ್ ಜರ್ನಿ ಮೆಣದಬತ್ತಿ ತಯಾರಿಕೆ, ಹ್ಯಾಂಡ್ ಮೇಡ್ ಸೋಪ್ಸ್, ಹೇರ್ ಶ್ಯಾಂಪು, ಹ್ಯಾಂಡ್ ಕ್ರಾಪ್ಟ್, ಕುಸುರಿ ಕೆಲಸಗಳು, ಮನೆಯ ಅಲಂಕೃತ ವಸ್ತುಗಳು ನೋಡಲು ಸಾಮಾನ್ಯ ಎನಿಸಿದರೂ ಅದನ್ನು ರೂಪಿಸುವ ತಾಳ್ಮೆ ನಮಗೆ ಇರಬೇಕಲ್ಲ. ಕೈ ಚೀಲಗಳಿಗೂ ಚಿತ್ರ ಬಿಡಿಸಿದ್ದರು. ಜೆಲ್ಲಿ ಕ್ಯಾಂಡಲ್ನ್ನು ಪರಿಮಳ ಬೀರುವ ಪ್ರಕೃತಿದತ್ತ ಪದಾರ್ಥಗಳನ್ನು ಬಳಸಿ ತಯಾರಿಸಿದ್ದರು.

ಒಂದು ರೌಂಡ್ ಗ್ಲಾಸಿನೊಳಗೆ ಮೇಣದ ಬತ್ತಿ ಜೊತೆಗೆ ಜೆಲ್ ವ್ಯಾಕ್ಸ್ ತುಂಬಿ ಅದಕ್ಕೆ ಪಲಾವ್ ಮಾಡಲು ಬಳಸುವ ಚಕ್ರಮೊಗ್ಗು, ಯಾಲಕ್ಕಿ, ಲವಂಗ, ತಾರೆಹೂ ಸಾಂಬಾರ ಪದಾರ್ಥ ಬಳಸಿದ್ದರು. ಮೆಣದ ಬತ್ತಿ ಉರಿವಾಗ ಪರಿಮಳ ಬೀರುವುದಂತೆ! ಮನೆಯಲ್ಲಿಯೇ ತಾವೇ ತಯಾರಿಸುವ ಸೋಪುಗಳನ್ನು ಯಾವುದೇ ಕೆಮಿಕಲ್ ಬಳಸದೆ ನೈಸರ್ಗಿಕ ದಾಸವಾಳ, ಬೀಟ್ ರೂಟ್ ಅಲೊವೆರಾ ಇವೇ ಮೊದಲಾಗಿ ತ್ವಚೆಗೆ ಆರೋಗ್ಯಕರವಾದದ್ದನ್ನು ಬಳಸಿ ತಯಾರಿಸಿದ್ದಾಗಿ ತಿಳಿಸಿದರು. ಸೋಪು ಶ್ಯಾಂಪ್ಸ್ನ್ನು ಮನೆಗೆ ಬಂದು ಜನ ಖರೀದಿಸುವುದಾಗಿ ತಿಳಿಸಿದರು.

ನೀವು ಹೊರಗೆ ಎಲ್ಲೂ ಈ ಕಲೆಯ ಪ್ರದರ್ಶನ ಮಾಡಿಲ್ಲವೇ ಕೇಳಿದೆ. ಮೈಸೂರು ಮಹಾರಾಜ ಗ್ರೌಂಡ್ನಲ್ಲಿ ಒಮ್ಮೆ ಮತ್ತು ಹಾಸನ ರಾಯಲ್ ಅಪೊಲೋ ಶಾಲೆಯಲ್ಲಿ ಇನ್ನೊಮ್ಮೆ ಪ್ರದರ್ಶನ ಮಾಡಿದ್ದೇನೆ ಎಂದು ಪೋಟೋ ಹಂಚಿಕೊಂಡರು.

ಕಲೆಗೆ ಬೆಲೆಕಟ್ಟಲು ಸಾಧ್ಯವೇ ಎನ್ನುವ ನಾಣ್ಣುಡಿಯಂತೆ ಇವರ ಕಲೆಕಸುತಿಗಳು ಮುಖವಿಸ್ಮಿತನನ್ನಾಗಿಸಿತು,
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ೩ನೇ ಕ್ರಾಸ್,
ಹಾಸನ-೫೭೩೨೦೧.
