ಕೊರಟಗೆರೆ:- ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಕೊರಟಗೆರೆ ತಾಲೂಕಿನ ಗೊರವನಹಳ್ಳಿ ಮಹಾಲಕ್ಷ್ಮಿ ದೇವಾಲಯಕ್ಕೆ ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಾಡಿನ ಸುಭಿಕ್ಷತೆ, ಕ್ಷೇತ್ರದ ಜನರ ಅಭಿವೃದ್ಧಿ ಹಾಗೂ ಜನರ ಕಲ್ಯಾಣಕ್ಕಾಗಿ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ಪುನರ್ರಚನೆ ಕುರಿತ ಚರ್ಚೆಗಳು ತೀವ್ರಗೊಂಡಿರುವ ಸಂದರ್ಭದಲ್ಲೇ ರಾಜೇಂದ್ರ ರಾಜಣ್ಣ ಅವರು ಮಹಾಲಕ್ಷ್ಮಿ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ನೆರವೇರಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ರಾಜೇಂದ್ರ ರಾಜಣ್ಣ ಅವರು ಹರಕೆ ಹೊತ್ತು ದೇವಿಯ ಆಶೀರ್ವಾದ ಪಡೆದಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ದೇವಾಲಯಕ್ಕೆ ಆಗಮಿಸಿದ ರಾಜೇಂದ್ರ ರಾಜಣ್ಣ ಅವರನ್ನು ದೇವಸ್ಥಾನದ ಅಧಿಕಾರಿಗಳು ಹಾಗೂ ಭಕ್ತರು ಆತ್ಮೀಯವಾಗಿ ಸ್ವಾಗತಿಸಿದರು. ಪೂಜಾ ವಿಧಿವಿಧಾನಗಳ ನಂತರ ದೇವಿಯ ಪ್ರಸಾದ ಸ್ವೀಕರಿಸಿದ ಅವರು, ಜನರ ಸೇವೆಗೆ ಇನ್ನಷ್ಟು ಶಕ್ತಿ ಹಾಗೂ ಅವಕಾಶ ದೊರೆಯಲಿ ಎಂದು ಪ್ರಾರ್ಥಿಸಿದ್ದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಹನುಮಾನ್, ದೇವಾಲಯದ ವಿಶೇಷ ಕರ್ತವ್ಯಾಧಿಕಾರಿ ಕೇಶವಮೂರ್ತಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ತಿಮ್ಮರಾಜು, ಬೋರಣ್ಣ, ಮಾಜಿ ತೀತಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಟರಾಜ್ ಹಾಗೂ ತೀತಾ ವಿ.ಎಸ್.ಎಸ್.ಎನ್ ಅಧ್ಯಕ್ಷ ಮುರುಳಿ ಉಪಸ್ಥಿತರಿದ್ದರು.
ರಾಜಕೀಯ ಬೆಳವಣಿಗೆಗಳ ನಡುವೆಯೇ ನಡೆದ ಈ ಭೇಟಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಮುಂಬರುವ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಕುರಿತು ಬೆಳವಣಿಗೆಗಳತ್ತ ಎಲ್ಲರ ಚಿತ್ತ ನೆಟ್ಟಿದೆ.
ಗೊರವನಹಳ್ಳಿ ಮಹಾಲಕ್ಷ್ಮಿಯ ಆಶೀರ್ವಾದ ಪಡೆದು ರಾಜೇಂದ್ರ ರಾಜಣ್ಣ ಅವರು ತಮ್ಮ ರಾಜಕೀಯ ಪಯಣಕ್ಕೆ ಹೊಸ ಉತ್ಸಾಹ ತುಂಬಿಕೊಂಡಿದ್ದಾರೆ ಎಂದು ಅವರ ಬೆಂಬಲಿಗರು ಅಭಿಪ್ರಾಯಪಟ್ಟಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ.
