ಹಾಸನ, ಜೂ.23: ಗಾಂಜಾ ಪ್ರಕರಣದಲ್ಲಿ ಅನಗತ್ಯವಾಗಿ ಸಿಲುಕಿಸುವ ಬೆದರಿಕೆ, ಅಧಿಕಾರಿಗಳ ಕಿರುಕುಳ ಹಾಗೂ ಮಾನಸಿಕ ಒತ್ತಡದಿಂದ ಮನನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಸದ್ಯ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಘಟನೆಯು ಸ್ಥಳೀಯ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ನಾರ್ವೆ ಹೊಸಳ್ಳಿ ಗ್ರಾಮದ ಅಜಯ್ಕುಮಾರ್ ಎಂದು ಗುರುತಿಸಲಾಗಿದೆ. ಅವರು ಕಳೆದ ಆರು ತಿಂಗಳಿನಿಂದ ಸಕಲೇಶಪುರ ಪಟ್ಟಣದ ಹಳೇಸಂತವೇರಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಖಾಸಗಿ ಔಷಧ ಕಂಪನಿಯೊಂದರಲ್ಲಿ ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಜಯ್ಕುಮಾರ್ ಅವರ ಆರೋಪದ ಪ್ರಕಾರ, ಅದೇ ಬಡಾವಣೆಯಲ್ಲಿ ವಾಸಿಸುತ್ತಿರುವ ರವಿ ಎಂಬಾತ ತನ್ನ ವಿರುದ್ಧ ಅಬಕಾರಿ ಇಲಾಖೆಗೆ ಸುಳ್ಳು ಮಾಹಿತಿ ನೀಡಿದ್ದಾನೆ. ಈ ಮಾಹಿತಿಯ ಆಧಾರದ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೆ ಪರಿಶೀಲನೆ ವೇಳೆ ಯಾವುದೇ ರೀತಿಯ ಗಾಂಜಾ ಅಥವಾ ಮಾದಕ ವಸ್ತು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ ತಮ್ಮನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ತಾವು ಗಾಂಜಾ ಸೇವನೆ ಮಾಡಿಲ್ಲ ಎಂಬುದು ದೃಢಪಟ್ಟಿದೆ ಎಂದು ಅಜಯ್ಕುಮಾರ್ ಹೇಳಿದ್ದಾರೆ. ಆದರೂ ತಮ್ಮ ವಿರುದ್ಧ ಪ್ರಕರಣ ದಾಖಲಿಸುವ ಪ್ರಯತ್ನಗಳು ಮುಂದುವರಿದಿದ್ದು, ಅಧಿಕಾರಿಗಳು ಕಠಿಣ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಈ ಪ್ರಕರಣದಿಂದ ಪಾರಾಗಲು ₹10 ಸಾವಿರ ಹಣವನ್ನು ಪಡೆದಿದ್ದಾರೆ ಎಂದು ಅಜಯ್ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲು ಸಿದ್ಧತೆ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ನಂತರ ಸಂಬಂಧಿಸಿದ ಅಬಕಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯ ಒದಗಿಸುವಂತೆ ಕೋರಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ದೂರಿದ್ದಾರೆ.
ಈ ಬೆಳವಣಿಗೆಗಳಿಂದ ಮಾನಸಿಕವಾಗಿ ಕುಗ್ಗಿದ್ದ ಅಜಯ್ಕುಮಾರ್, ತೀವ್ರ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ಬಳಿಕ ನೀಡಿದ ಹೇಳಿಕೆಯಲ್ಲಿ, “ತನ್ನ ಸಾವಿಗೆ ಸಕಲೇಶಪುರ ಅಬಕಾರಿ ಇಲಾಖೆಯ ಕೆಲ ಅಧಿಕಾರಿಗಳು ಹಾಗೂ ರವಿ ಎಂಬಾತನೇ ಕಾರಣ” ಎಂದು ಆರೋಪಿಸಿದ್ದಾರೆ.
ವಿಷ ಸೇವಿಸಿದ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಕುಟುಂಬಸ್ಥರು ಅವರನ್ನು ತಕ್ಷಣ ಸಕಲೇಶಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಸ್ಥಳೀಯರಲ್ಲಿ ಹಲವು ಪ್ರಶ್ನೆಗಳು ಮೂಡಿದ್ದು, ಅಜಯ್ಕುಮಾರ್ ಮಾಡಿರುವ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆ ಹೊರತರುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳ ಪಾತ್ರವಿದೆಯೇ ಎಂಬುದರ ಕುರಿತು ಕೂಡ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯ ಕೇಳಿಬಂದಿದೆ.
ಇದೇ ವೇಳೆ, ಈ ಎಲ್ಲಾ ಆರೋಪಗಳು ಅಜಯ್ಕುಮಾರ್ ಅವರ ಹೇಳಿಕೆಯನ್ನು ಆಧರಿಸಿವೆ. ಆರೋಪಗಳ ಕುರಿತು ಸಕಲೇಶಪುರ ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ರವಿ ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.
