ತುಮಕೂರು : ನಗರದ ಜೆ.ಸಿ.ರಸ್ತೆಯಲ್ಲಿರುವ ವೀರಸೌಧ ಕಟ್ಟಡದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಸೈನಿಕರ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಗ್ರಾಮಾಂತರ ಹಾಗೂ ತುಮಕೂರು ಜಿಲ್ಲಾ ಸೈನಿಕರು, ಮಾಜಿ ಯೋಧರು ಮತ್ತು ಅವಲಂಬಿತರ ಸಮಿತಿಯ ಸಹಯೋಗದಲ್ಲಿ ಕಾನೂನು ಸೇವಾ ಕೇಂದ್ರದ ಉದ್ಘಾಟನೆ ಮತ್ತು ವೀರ ಪರಿವಾರ ಸಹಾಯತ ಯೋಜನೆ ಬಗ್ಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಲೋಕೇಶಧನಪಾಲಹವಲೆ ವಹಿಸಿ ಮಾತನಾಡುತ್ತಾ ಯೋಧರು ಮತ್ತು ಯೋಧರ ಕುಟುಂಬದ ಅವಲಂಬಿತರಿಗೆ ಕಾನೂನು ಸೇವೆಗಳ ಕುರಿತಾಗಿ ವಿವರಣೆ ಮತ್ತು ಅದರಿಂದ ಯಾವ ರೀತಿಯಾದ ಸೌಲಭ್ಯಗಳನ್ನು ಪಡೆಯುವುದರ ಕುರಿತಾಗಿ ವಿವರಣೆಯನ್ನು ನೀಡಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಗೋಪಾಲ್ ರವರು ದೇಶದಲ್ಲಿನ ಸೈನಿಕರ ಪಾತ್ರದ ಕುರಿತು ಮಾತನಾಡುತ್ತಾ ಸೈನಿಕರು ಹಗಲು ರಾತ್ರಿ, ಮಳೆ ಚಳಿ ಬಿಸಲು ಎನ್ನದೇ ನಮ್ಮ ದೇಶದ ಗಡಿಯನ್ನು ಕಾಯುತ್ತಿರುತ್ತಾರೆ ಅದೂ ಅಲ್ಲದೇ ಪ್ರಕೃತಿ ವಿಕೋಪಗಳು ಸಂಭವಿಸಿದಾಗಲೂ ಸಹ ಸೈನಿಕರ ಪಾತ್ರ ಅತ್ಯಂತ ಮಹತ್ತರವಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ, ದೇಶದ ರಕ್ಷಣೆ ಅವರಿಗೆ ಮೊದಲು ಆಧ್ಯತೆಯಾಗಿರುತ್ತದೆ, ಅಂತಹ ಸೈನಿಕರು ಮತ್ತು ಅವರ ಕುಟುಂಬಕ್ಕೆ ಸಮಾಜದ ಕಾನೂನಿನ ಕುರಿತಾದ ಅರಿವು ಮೂಡಿಸುವುದು ಮತ್ತು ಕಾನೂನಿನ ಸೌಲಭ್ಯಗಳನ್ನು ಒದಗಿಸಿಕೊಡುವುದು ನಮ್ಮ ಪೊಲೀಸ್ ಇಲಾಖೆ ಹಾಗೂ ನ್ಯಾಯಾಂಗ ಇಲಾಖೆಯ ಜವಾಬ್ದಾರಿಯಾಗಿದೆ ಅದರಂತೆ ನಾವು ಸಹ ಅವರುಗಳಿಗೆ ಆದ್ಯತೆಯ ಮೇರೆಗೆ ಅವರು ಮತ್ತು ಅವರ ಕುಟುಂಬದವರ ನೆರವಿಗೆ ಬರುತ್ತಿದ್ದೇವೆ, ಅಲ್ಲದೇ ಅವರುಗಳಿಗೆ ಕಾನೂನಿನ ಸೇವೆಗಳ ಬಗ್ಗೆ ಅರಿವು ಮೂಡಿಸುವುದರ ಸಲುವಾಗಿ ಇಂದು ಆಯೋಜಿಸಿರುವ ಕಾರ್ಯಕ್ರಮವು ಅತ್ಯಂತ ಪ್ರಶಂಸನೀಯ ಕಾರ್ಯಕ್ರಮವಾಗಿದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 4 ಕರ್ನಾಟಕ ಎನ್.ಸಿ.ಸಿ. ಬೆಟಾಲಿಯನ್ ಉಪ ಕಮಾಂಡೆAಟ್ ಆದ ಲೆಫ್ಟಿನೆಂಟ್ ಕರ್ನಲ್ ಎಸ್. ಅಭಿಲಾಷ್, , ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಉಮೇಶ್ ಚಂದ್ರ ಎನ್.ಆರ್, ಸೈನಿಕ ಕಲ್ಯಾಣ ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರಾದ ಮೇಜರ್ ಬಾಲಸುಬ್ರಹ್ಮಣ್ಯಂ, ಜಿಲ್ಲಾ ಮಾಜಿ ಸೈನಿಕರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷರಾದ ಬೊಮ್ಮಲಿಂಗಣ್ಣ, ಕಾರ್ಯದರ್ಶಿ ವಿ.ಡಿ.ನಾಗರಾಜ್, ಡಾ|| ಹಿರೇಮಠ್, ಕರ್ನಲ್ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ
