ಚಿತ್ರ ಶೀರ್ಷಿಕೆ: ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ನಡೆದ ದುರ್ಗ ನಮಸ್ಕಾರ ಪೂಜೆಯ ದೃಶ್ಯ.
ರಾಮನಾಥಪುರ, ಜೂನ್ 26: ಪುರಾಣ ಪ್ರಸಿದ್ಧ ದೇವಾಲಯಗಳ ಬೀಡಾಗಿರುವ, ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಕಾವೇರಿ ನದಿ ತಟದ ರಾಮನಾಥಪುರದ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಭಕ್ತಿ ಶ್ರದ್ಧೆಯಿಂದ ದುರ್ಗ ನಮಸ್ಕಾರ ಪೂಜೆ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ದೇವಾಲಯವನ್ನು ವಿವಿಧ ಬಗೆಯ ಹೂಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ಅಡ್ಡೆಯಲ್ಲಿ ಪ್ರತಿಷ್ಠಾಪಿಸಿ ವೇದೋಕ್ತ ವಿಧಿ-ವಿಧಾನಗಳಂತೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬಳಿಕ ಉತ್ಸವಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ದೇವಾಲಯದ ಸುತ್ತ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ವಿವಿಧ ಊರುಗಳಿಂದ ಆಗಮಿಸಿದ್ದ ನೂರಾರು ಭಕ್ತರು ಭಕ್ತಿಭಾವದಿಂದ ಮೂರು ಸುತ್ತು ಪ್ರದಕ್ಷಿಣೆ ಹಾಕಿ, ಸ್ವಾಮಿಯ ಸರ್ವಸೇವೆಯಲ್ಲಿ ಪಾಲ್ಗೊಂಡು ಭಕ್ತಿ ಪರವಶರಾದರು.
ಕಾರ್ಯಕ್ರಮದ ಅಂಗವಾಗಿ ದೇವಾಲಯದ ಪಾರುಪತ್ತೇಗಾರ್ ರಮೇಶ್ ಭಟ್ ಅವರು ಆಗಮಿಸಿದ್ದ ಭಕ್ತರಿಗೆ ಪ್ರಸಾದ ವಿತರಣೆ ವ್ಯವಸ್ಥೆ ಮಾಡಿದ್ದರು.
ವರದಿ: ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ.
