ಕೆ.ಆರ್.ಪೇಟೆ: ಕೆಂಪೇಗೌಡರ ದೂರದೃಷ್ಟಿಯ ಫಲವಾಗಿ ಬೆಂಗಳೂರು ವೇಗವಾಗಿ ಬೆಳೆದು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತು ಎಂದು ಪಿಡಿಓ ಶಿವಕುಮಾರ್ ತಿಳಿಸಿದರು.
ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಬೀರುವಳ್ಳಿ ಗ್ರಾ.ಪಂ ವತಿಯಿಂದ ನಾಡಪ್ರಭು ಕೆಂಪೇಗೌಡರ 517ನೇ ಜಯಂತೋತ್ಸವದ ಪ್ರಯುಕ್ತ ಗ್ರಾ.ಪಂ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು ಕೆಂಪೇಗೌಡರು ಬೆಂಗಳೂರು ಸೇರಿದಂತೆ ವಿವಿಧೆಡೆ ಆಡಳಿತ ನಡೆಸಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರ ಆಲೋಚನೆಗಳು ಇಂದಿಗೂ ಪ್ರಸ್ತುತವಾಗಿವೆ. ನಾಡಪ್ರಭು ಕೆಂಪೇಗೌಡರು ಮಹೋನ್ನತ ದೂರದೃಷ್ಟಿ ಹೊಂದಿದ್ದರಿಂದ ಬೆಂಗಳೂರು ನಗರದಲ್ಲಿ ಇಂದಿಗೂ ಸಹ ಅನೇಕ ಕೆರೆಗಳ ಸಂರಕ್ಷಣೆ ಸಾಧ್ಯವಾಗಿದೆ. ಎಷ್ಟೇ ಜನಸಂದಣಿ ಇದ್ದರೂ ಎಲ್ಲರಿಗೂ ಅನುಕೂಲವಾಗುವ ಹಾಗೆ ನಗರವನ್ನು ನಿರ್ಮಿಸಿ ಇಡೀ ವಿಶ್ವಕ್ಕೆ ಮಾದರಿಯಾಗುವ ಹಾಗೆ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದಾರೆ. ಬೆಂಗಳೂರು ಶಾಂತಿಗೆ ಹೆಸರಾದ ನಗರವಾಗಿದೆ. ಬೆಂಗಳೂರು ನಗರ ನಿರ್ಮಾತೃ ಕೆಂಪೇಗೌಡರು ಸರ್ವ ಸಮುದಾಯದ ಜನರನ್ನು ಒಗ್ಗೂಡಿಸಿ ಮುನ್ನೆಡೆಸಿದರು. ಜಾತ್ಯತೀತ ಮನೋಭಾವ ಹೊಂದಿದ್ದರು. ಹೋರಾಟದ ಗುಣಗಳನ್ನು ಮೈಗೂಡಿಸಿಕೊಂಡಿದ್ದರು. ವೈಜ್ಞಾನಿಕ ಹಿನ್ನೆಲೆಯಲ್ಲಿ ಬೆಂಗಳೂರ ನಗರವನ್ನು ನಿರ್ಮಿಸಿದ್ದರಿಂದ ಬೆಂಗಳೂರು ನಗರ ಸುಂದರವಾಗಿ ನಿರ್ಮಾಣಗೊಂಡಿದೆ. ನಾಡಿನ ಹಿತಕ್ಕಾಗಿ ಶ್ರಮಿಸಿದ ಅವರ ಯೋಚನೆಗಳು, ಯೋಜನೆಗಳು ನಮಗೆಲ್ಲರಿಗೂ ಮಾದರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಬಿಲ್ ಕಲೆಕ್ಟರ್ಗಳಾದ ಮಂಜುನಾಥ್, ಮಹೇಂದ್ರ ಕುಮಾರ್,ಕಾರ್ಯಕರ್ತ ಮೋಹನ್, ಹೋಟೆಲ್ ಕುಳ್ಳಪ್ಪ, ಕೃಷ್ಣೆಗೌಡ, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
