ಕೊರಟಗೆರೆ:– ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಕೊರಟಗೆರೆ ಪಟ್ಟಣದ ಹಿಂದೂ ಸಾದರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಹಾಗೂ ಒಕ್ಕಲಿಗ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಶನಿವಾರ ವಿಜೃಂಭಣೆಯಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕೆಂಪೇಗೌಡ ಭವನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಒಟ್ಟು ₹1 ಕೋಟಿ 1 ಲಕ್ಷ ದೇಣಿಗೆ ಘೋಷಣೆಯಾಗಿದ್ದು, ಸಮುದಾಯಕ್ಕೆ ಜಮೀನು ಮಂಜೂರು ಮಾಡುವ ಭರವಸೆಯೂ ವ್ಯಕ್ತವಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಮಂಜುನಾಥ ಕೆ., ಕೆಂಪೇಗೌಡ ಭವನ ಹಾಗೂ ವಿದ್ಯಾರ್ಥಿ ನಿಲಯಕ್ಕೆ ಅಗತ್ಯ ಭೂಮಿಯ ದಾಖಲೆಗಳ ಪರಿಶೀಲನೆ ಪೂರ್ಣಗೊಂಡಿದ್ದು, ವಿಶೇಷ ಪ್ರಕರಣವಾಗಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರೊಂದಿಗೆ ಚರ್ಚಿಸಿ ಜಮೀನು ಮಂಜೂರು ಮಾಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಕಾಮರಾಜು ಮಾತನಾಡಿ, ನಾಡಪ್ರಭು ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರುವಾಸಿಯಾಗಿದೆ. ಅವರ ಅಭಿವೃದ್ಧಿ ದೃಷ್ಟಿಕೋನ ಎಲ್ಲರಿಗೂ ಮಾದರಿಯಾಗಿದ್ದು, ಕೊರಟಗೆರೆಯಲ್ಲೂ ಕೆಂಪೇಗೌಡ ಭವನ ನಿರ್ಮಾಣಕ್ಕೆ ಎಲ್ಲರ ಸಹಕಾರ ಇರಲಿದೆ ಎಂದರು.
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ರಂಗರಸಯ್ಯ, ಉಪಾಧ್ಯಕ್ಷ ಎಲ್.ವಿ. ಪ್ರಕಾಶ್, ಕಾರ್ಯದರ್ಶಿ ನರಸಿಂಹರಾಜು, ಖಜಾಂಚಿ ಸಾಕರಾಜು, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಸುಧಾಕರ್, ಮಾಜಿ ತಾಪಂ ಸದಸ್ಯ ರವಿಕುಮಾರ್, ಕೆಂಪಣ್ಣ, ತಾಪಂ ಇಒ ಅಪೂರ್ವ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
75 ವಿದ್ಯಾರ್ಥಿಗಳಿಗೆ ಸನ್ಮಾನ
ಕೆಂಪೇಗೌಡರ ಜೀವನಚರಿತ್ರೆ ಕುರಿತು ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರಬಂಧ, ಚಿತ್ರಕಲೆ, ರಸಪ್ರಶ್ನೆ, ಭಾಷಣ ಹಾಗೂ ಭಾವಚಿತ್ರ ಸ್ಪರ್ಧೆಗಳ ವಿಜೇತರಾದ 50 ವಿದ್ಯಾರ್ಥಿಗಳು ಹಾಗೂ 2025-26ನೇ ಸಾಲಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ 25 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಗಡಿನಾಡು ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಎ ಎಂ ಚಿದಂಬರ್ ಅವರನ್ನೂ ಉದ್ಯಮಿ ಎಂಎನ್ಜೆ ಮಂಜುನಾಥ ಹಾಗೂ ತಹಶೀಲ್ದಾರ್ ಮಂಜುನಾಥ ಗೌರವಿಸಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್. ಕೃಷ್ಣಮೂರ್ತಿ ಅವರು ಕೆಂಪೇಗೌಡ ಭವನ ನಿರ್ಮಾಣಕ್ಕೆ ₹51 ಲಕ್ಷ ದೇಣಿಗೆ ಘೋಷಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಅವಿರತಶ್ರಮಪಟ್ಟಿದ್ದು ಈಗಲೂ ಕ್ಷೇತ್ರದಲ್ಲಿ ಸಮಾಜಸೇವೆ ಮುಂದುವರಿಸುತ್ತಿದ್ದು, ಒಕ್ಕಲಿಗ ಸಮುದಾಯದ ಅಭಿವೃದ್ಧಿಗೂ ಆದ್ಯತೆ ನೀಡುವುದಾಗಿ ತಿಳಿಸಿದರು.
ಯಶಸ್ವಿಯಾದ ಜಯಂತಿ ಆಚರಣೆ
ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರ್ ಮಂಜುನಾಥ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಜಯಂತಿ ಆಚರಿಸಲಾಯಿತು. ಬಳಿಕ ರಣಬೈರೇಗೌಡರ ಸಮಾಧಿಗೆ ಪೂಜೆ ಸಲ್ಲಿಸಿ, ಹಿಂದೂ ಸಾದರ ಸಮುದಾಯ ಭವನದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮ ಸಾವಿರಾರು ಜನರ ಸಮ್ಮುಖದಲ್ಲಿ ಯಶಸ್ವಿಯಾಗಿ ನೆರವೇರಿತು.
2028ರೊಳಗೆ ಕೊರಟಗೆರೆ ಪಟ್ಟಣದಲ್ಲಿ ಕೆಂಪೇಗೌಡ ಸಮುದಾಯ ಭವನ ನಿರ್ಮಾಣವಾಗಲಿದೆ. ಸಂಘದಿಂದ ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದ್ದು, ಭವನ ನಿರ್ಮಾಣಕ್ಕೆ ನಾನು ₹50 ಲಕ್ಷ ದೇಣಿಗೆ ನೀಡುತ್ತೇನೆ. ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.
— ಮಂಜುನಾಥ (ಎಂಎನ್ಜೆ), ಸಮಾಜಸೇವಕ, ಕೊರಟಗೆರೆ
ವರದಿ -ಶ್ರೀನಿವಾಸ್ ಕೊರಟಗೆರೆ
