ಹಾಸನ : ಚುಟುಕು ಸಾಹಿತ್ಯವು ಕನ್ನಡ ಸಾಹಿತ್ಯದ ಅತ್ಯಂತ ಸುಂದರ ಮತ್ತು ಪರಿಣಾಮಕಾರಿ ಪ್ರಕಾರಗಳಲ್ಲಿ ಒಂದಾಗಿದೆ. ಕೆಲವೇ ಸಾಲುಗಳಲ್ಲಿ ಆಳವಾದ ಜೀವನತತ್ತ್ವ, ಹಾಸ್ಯ, ನೀತಿ, ಅನುಭವ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವ ಸಾಮರ್ಥ್ಯ ಇದಕ್ಕಿದೆ. ಆದ್ದರಿಂದ ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯವನ್ನು, ಅಂದರೆ ಸೊಬಗು, ಸಾರ್ಥಕತೆ ಮತ್ತು ಸಿಹಿತನವನ್ನು ನೀಡುತ್ತದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಅಭಿಪ್ರಾಯಪಟ್ಟರು.
ಅವರು ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಗರದ ಎ.ವಿ.ಕೆ. ಕಾಲೇಜಿನ ಸಭಾಂಗಣದಲ್ಲಿ ಡಾ. ರತ್ನ ಹಾಲಪ್ಪಗೌಡ ಸರ್ವಾಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಹಾಸನ ಜಿಲ್ಲಾ ಚೊಚ್ಚಲ ಚುಟುಕು ಸಾಹಿತ್ಯ ಸಮ್ಮೇಳನದ ಅಂಗವಾಗಿ ‘ಚುಟುಕು ಸಾಹಿತ್ಯ, ಬದುಕಿಗೆ ಲಾಲಿತ್ಯ’ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ ಚುಟುಕುಗಳು ಓದುಗರ ಮನಸ್ಸನ್ನು ಚಿಂತನೆಗೆ ಹಚ್ಚುತ್ತವೆ. ಬದುಕಿನ ಸತ್ಯಗಳನ್ನು ಸರಳ ಪದಗಳಲ್ಲಿ ತಿಳಿಸುತ್ತವೆ. ಕೆಲವೊಮ್ಮೆ ನಗಿಸುತ್ತವೆ, ಮತ್ತೊಮ್ಮೆ ಎಚ್ಚರಿಸುತ್ತವೆ. ನೀತಿ, ಪ್ರೀತಿ, ಸ್ನೇಹ, ಪ್ರಕೃತಿ, ಸಮಾಜ, ಸಮಯದ ಮಹತ್ವ ಇತ್ಯಾದಿ ವಿಷಯಗಳನ್ನು ಚುಟುಕಾಗಿ ತಿಳಿಸುವ ಮೂಲಕ ಜೀವನವನ್ನು ಉತ್ತಮಗೊಳಿಸಲು ಪ್ರೇರೇಪಿಸುತ್ತವೆ. ಇಂದಿನ ವೇಗದ ಯುಗದಲ್ಲಿ ದೀರ್ಘ ಸಾಹಿತ್ಯ ಓದಲು ಸಮಯವಿಲ್ಲದವರಿಗೂ ಚುಟುಕು ಸಾಹಿತ್ಯ ಬಹಳ ಉಪಯುಕ್ತವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ವಿಚಾರಗಳನ್ನು ಮನಸ್ಸಿಗೆ ತಲುಪಿಸುವ ಶಕ್ತಿ ಇದಕ್ಕಿದೆ. ಆದ್ದರಿಂದ, “ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ” ಎಂಬ ಮಾತು ಅಕ್ಷರಶಃ ಸತ್ಯ. ಚುಟುಕು ಸಾಹಿತ್ಯವು ಬದುಕಿಗೆ ಸೊಬಗು, ಚಿಂತನೆ ಮತ್ತು ಸಂಸ್ಕಾರವನ್ನು ಬೆಳೆಸುವ ಅಮೂಲ್ಯ ಸಾಹಿತ್ಯ ಪ್ರಕಾರವಾಗಿದೆ. ಹಾಸನ ಜಿಲ್ಲೆಯಲ್ಲಿ ಗೆಳೆಯ ಬಾನಂ ಲೋಕೇಶ್ ಸಾರಥ್ಯದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಗುಣಾತ್ಮಕ ಕಾರ್ಯಕ್ರಮಗಳನ್ನು ಮಾಡುತ್ತಾ ಯುವ ಮನಸ್ಸುಗಳಿಗೆ, ಚುಟುಕು ಆಸಕ್ತ ಕವಿಗಳಿಗೆ ಉತ್ತಮ ವೇದಿಕೆಯನ್ನು ಒದಗಿಸುತ್ತಾ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದೆ. ಯಾವುದೇ ಸರಕಾರಿ ಅನುದಾನವಿಲ್ಲದೇ ಇಂತಹ ಅದ್ಭುತ ಜಿಲ್ಲಾ ಸಮ್ಮೇಳನ ಸಂಘಟಿಸುವುದು ಸುಲಭದ ಮಾತಲ್ಲ. ಇದರ ಹಿಂದೆ ಬಾನಂ ಲೋಕೇಶ್ ಅವರಿಗೆ ಇರುವ ಸಾಮುದಾಯಿಕ ಪ್ರೀತಿ ಕಾರಣ ಎಂದರು.
ಗೋಷ್ಠಿಯಲ್ಲಿ ಆಚಾರ್ಯ ಕಾಮರ್ಸ್ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಆರ್. ಆದರ್ಶ ಅವರು ‘ಅನುಭವದ ಅಮೃತ-ಚುಟುಕುವಿನ ಬಟ್ಟಲಲ್ಲಿ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಜಿಲ್ಲಾ ಲೇಖಕಿಯರ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿಯವರು ‘ಚುಟುಕು ಚುರುಕು- ನಗುತ ನಾಟುವ ಸಾಹಿತ್ಯ’ ಕುರಿತು ವಿಚಾರ ಮಂಡಿಸಿದರು. ಶಿವಮೊಗ್ಗ ಕರ್ನಾಟಕ ಸಂಘದ ಪೂರ್ವಾಧ್ಯಕ್ಷರಾದ ಎಂ.ಎನ್. ಸುಂದರ್ರಾಜ್ ಅವರು ‘ಬಿಂದು ಸಿಂದುವಾದಂತೆ – ಚುಟುಕುವಿನಲ್ಲಿ ಜೀವನ ದರ್ಶನ’ ವಿಷಯ ಕುರಿತು ಅಭಿಪ್ರಾಯ ಮಂಡಿಸಿದರು. ಸಾಹಿತಿ ಸೌಮ್ಯ ಬಾನಾಡಿ ಅವರು ‘ಚುಟುಕು : ಸಣ್ಣ ಸಾಲುಗಳ ದೊಡ್ಡದನಿ’ ಎಂಬ ವಿಚಯದಡಿ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಾ.ನಂ. ಲೋಕೇಶ್, ಕೇಂದ್ರ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಡಾ. ಎಂ.ಜಿ.ಆರ್.ಅರಸ್, ಸಮ್ಮೇಳನದ ಸರ್ವಾಧ್ಯಕ್ಷೆ ಡಾ. ರತ್ನಹಾಲಪ್ಪಗೌಡ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾ ಗೌರವಾಧ್ಯಕ್ಷ ರವಿ ನಾಕಲಗೂಡು, ಬೆಳಕು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಅಣ್ಣಪ್ಪ ಮೇಟಿಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಾಹಿತಿ ಪದ್ಮಮೂರ್ತಿ, ಕಾತ್ಯಾಯಿನಿ ತೆವರೀಮಠ್, ಸುಧಾ ಕಲ್ಯಾಣ್, ಹರೀಶ್ ಕುಮಾರ್ ಅವರುಗಳು ಕಾರ್ಯಕ್ರಮ ನಿರ್ವಹಣೆ ಮಾಡಿದರು.
