ರಾಮನಾಥಪುರ, ಜೂನ್ 28: ಬೆಂಗಳೂರು ನಗರದ ನಿರ್ಮಾತೃ, ದೂರದೃಷ್ಟಿಯ ಆಡಳಿತಗಾರ ಹಾಗೂ ಯುಗಪುರುಷರಾದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಇಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂದು ಮಾಜಿ ಸಚಿವರು ಹಾಗೂ ಅರಕಲಗೂಡು ಕ್ಷೇತ್ರದ ಶಾಸಕ ಎ. ಮಂಜು ಅಭಿಪ್ರಾಯಪಟ್ಟರು.
ರಾಮನಾಥಪುರ ಹೋಬಳಿಯ ಹನ್ಯಾಳು ಗ್ರಾಮದಲ್ಲಿರುವ ತಮ್ಮ ನಿವಾಸದಲ್ಲಿ ನಾಡಪ್ರಭು ಕೆಂಪೇಗೌಡ ವಕ್ಕಲಿಗರ ಸಂಘದ ಪದಾಧಿಕಾರಿಗಳು ಭೇಟಿ ನೀಡಿ, ರಾಮನಾಥಪುರದಲ್ಲಿ ಆಯೋಜಿಸಿರುವ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡರು ತಮ್ಮ ದೂರದೃಷ್ಟಿಯ ಆಡಳಿತ, ನ್ಯಾಯಪ್ರಜ್ಞೆ ಹಾಗೂ ಪ್ರಜೆಗಳ ಕಲ್ಯಾಣದತ್ತ ಹೊಂದಿದ್ದ ಬದ್ಧತೆಯಿಂದ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಪರಿಸರ ಸಂರಕ್ಷಣೆ, ಕುಡಿಯುವ ನೀರಿನ ವ್ಯವಸ್ಥೆ, ನೀರಾವರಿ ಅಭಿವೃದ್ಧಿ, ದೇವಾಲಯಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಗಳು ಇಂದಿಗೂ ಸಮಾಜದ ಮೇಲೆ ಪ್ರಭಾವ ಬೀರುತ್ತಿವೆ ಎಂದು ಹೇಳಿದರು.
ಸಮಾನತೆ, ಜನಪರ ಆಡಳಿತ ಹಾಗೂ ಅಭಿವೃದ್ಧಿಯ ಆದರ್ಶಗಳನ್ನು ಪ್ರತಿಪಾದಿಸಿದ ಕೆಂಪೇಗೌಡರ ಜೀವನ ಮೌಲ್ಯಗಳನ್ನು ಅನುಸರಿಸುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಯುವ ಪೀಳಿಗೆ ಅವರ ಆದರ್ಶಗಳಿಂದ ಪ್ರೇರಣೆ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮಂಜು ಕರೆ ನೀಡಿದರು.
ಈ ಸಂದರ್ಭದಲ್ಲಿ ನಾಡಪ್ರಭು ಕೆಂಪೇಗೌಡ ವಕ್ಕಲಿಗರ ಸಂಘದ ಗೌರವಾಧ್ಯಕ್ಷ ಎಂ.ಎಲ್. ಗೋವಿಂದರಾಜು, ಅಧ್ಯಕ್ಷ ಉಪಾರಿಕೆಗೌಡ, ಪ್ರಧಾನ ಕಾರ್ಯದರ್ಶಿ ಬಿ.ಸಿ. ಹೊನ್ನೇಗೌಡ, ಖಜಾಂಚಿ ಬಸವರಾಜು, ಜಯಂತಿ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷ ಎಚ್.ಎಸ್. ಶಂಕರ್, ಸಮನ್ವಯ ಸಮಿತಿ ಸದಸ್ಯರಾದ ಆರ್.ಕೆ. ರಾಜೇಗೌಡ, ಜವರೇಗೌಡ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ಸಿ. ಮಂಜೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.
