ಶೃಂಗೇರಿ : ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ಸೇವೆಯನ್ನು ತಲುಪಿಸುವ ಉದ್ದೇಶದಿಂದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಅಂಗಸಂಸ್ಥೆಯಾದ ಶ್ರೀ ಭಾರತೀತೀರ್ಥ ಮಹಾಸ್ವಾಮೀಜಿ ಮೊಬೈಲ್ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ 400ಕ್ಕೂ ಅಧಿಕ ಮಂದಿ ಆರೋಗ್ಯ ಸೇವೆಯ ಪ್ರಯೋಜನ ಪಡೆದರು.
ಜೂನ್ 29ರಂದು ರೋಟರಿ ಕ್ಲಬ್ ಶೃಂಗೇರಿ ಹಾಗೂ ತೆಕ್ಕೂರು ಗ್ರಾಮಸ್ಥರ ಸಹಯೋಗದಲ್ಲಿ ತೆಕ್ಕೂರು ವೃತ್ತದ ಬಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಬಿರ ಆಯೋಜಿಸಲಾಗಿದ್ದು, 168 ಮಂದಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಜೂನ್ 30ರಂದು ವಿಕಾಸ ಸ್ವಸಹಾಯ ಸಂಘ, ಸಿದ್ದಾರಮಠ ಹಾಗೂ ಶ್ರೀ ಸಿದ್ದೇಶ್ವರ ಹಳೆಯ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಈ ಶಿಬಿರದಲ್ಲಿ 250ಕ್ಕೂ ಅಧಿಕ ಮಂದಿ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಶಿಬಿರದಲ್ಲಿ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮಕ್ಕಳ ತಜ್ಞರು, ನೇತ್ರ ತಜ್ಞರು, ಕಿವಿ-ಮೂಗು-ಗಂಟಲು (ಇಎನ್ಟಿ) ತಜ್ಞರು, ದಂತ ವೈದ್ಯರು, ಜನರಲ್ ಮೆಡಿಸಿನ್ ತಜ್ಞರು ಹಾಗೂ ಆಹಾರ ತಜ್ಞರು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಸಲಹೆಗಳನ್ನು ನೀಡಿದರು.

ಇದೇ ವೇಳೆ ಪ್ರಯೋಗಾಲಯ ಪರೀಕ್ಷೆಗಳು ಹಾಗೂ ಎಕ್ಸ್-ರೇ ಸೇವೆಯನ್ನು ಶೇ.50ರಷ್ಟು ರಿಯಾಯಿತಿ ದರದಲ್ಲಿ ಒದಗಿಸಲಾಯಿತು.
ಮಳೆಯ ನಡುವೆಯೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರವನ್ನು ಯಶಸ್ವಿಗೊಳಿಸಿದರು.
