ಕೊರಟಗೆರೆ, ಜುಲೈ 1: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹಣಮಂತಪುರ ಗ್ರಾಮದ ಬುದ್ಧನ ಮನೆ ವಾಲ್ಮೀಕಿ ವನ ಫಾರ್ಮ್ಹೌಸ್ನಲ್ಲಿ ಅಳವಡಿಸಿದ್ದ ಅರಣ್ಯ ಇಲಾಖೆಯ ಬೋನಿಗೆ ಚಿರತೆಯೊಂದು ಬಿದ್ದಿದ್ದು, ಕಳೆದ ಹಲವು ದಿನಗಳಿಂದ ಆತಂಕದಲ್ಲಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮದ ನಿವಾಸಿ ‘ಬಂದೂಕು’ ರಾಜಣ್ಣ ಅವರ ಮಾಹಿತಿಯ ಮೇರೆಗೆ, ಹಣಮಂತಪುರ ಗ್ರಾಮದ ಸರ್ವೇ ನಂ. 8/9, 8/10 ಹಾಗೂ 6ರಲ್ಲಿ ಇರುವ ಬುದ್ಧನ ಮನೆ ವಾಲ್ಮೀಕಿ ವನ ಫಾರ್ಮ್ಹೌಸ್ನಲ್ಲಿ ಅರಣ್ಯ ಇಲಾಖೆ ಬೋನು ಅಳವಡಿಸಿತ್ತು.

ಜೂನ್ 25ರಂದು ಫಾರ್ಮ್ಹೌಸ್ನಲ್ಲಿದ್ದ ಸಾಕು ನಾಯಿಯನ್ನು ಚಿರತೆಯೊಂದು ಎಳೆದೊಯ್ದಿದ್ದು, ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಘಟನೆ ಬಳಿಕ ಸ್ಥಳೀಯರಲ್ಲಿ ಭೀತಿ ಮನೆಮಾಡಿದ್ದರಿಂದ ಬಂದೂಕು ರಾಜಣ್ಣ ಅವರು ತಕ್ಷಣವೇ ಕೊರಟಗೆರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು.
ಮಾಹಿತಿ ಪಡೆದ ಅರಣ್ಯ ಇಲಾಖೆ ಸ್ಥಳಕ್ಕೆ ಭೇಟಿ ನೀಡಿ ಬೋನು ಅಳವಡಿಸಿತ್ತು. ಅದರಂತೆ ಬುಧವಾರ (ಜುಲೈ 1) ಮುಂಜಾನೆ ಸುಮಾರು 4 ಗಂಟೆಗೆ ಚಿರತೆ ಬೋನಿಗೆ ಬಿದ್ದಿದೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು, ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ನಡೆಸಿದರು.
ಚಿರತೆ ಸೆರೆ ಸಿಕ್ಕಿರುವುದರಿಂದ ಕಳೆದ ಹಲವು ದಿನಗಳಿಂದ ಆತಂಕದಲ್ಲಿದ್ದ ಹಣಮಂತಪುರ, ಎಲೆರಾಂಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಕೊರಟಗೆರೆ ವಲಯ ಅರಣ್ಯಾಧಿಕಾರಿ ಹನುಮಂತರಾಜು, ಡಿಆರ್ಎಫ್ ಸಿಬ್ಬಂದಿ ದಿಲೀಪ್, ಬೀಟ್ ಗಾರ್ಡ್ ಪೃಥ್ವಿ, ಸಿಬ್ಬಂದಿಗಳಾದ ನರಸರಾಜು, ರಾಜಣ್ಣ, ವೆಂಕಟೇಶ್, ಕೆಂಪರಾಜ್ ಹಾಗೂ ಸ್ಥಳೀಯರಾದ ಬಂದೂಕು ರಾಜಣ್ಣ ಮತ್ತು ವೀರೇಶ್ ಸಹಕರಿಸಿದರು.
– ವರದಿ: ನರಸಿಂಹಯ್ಯ ಹೊಸಕೋಟೆ
